ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒತ್ತು

24byd2
Published on

ಬ್ಯಾಡಗಿ: ಗ್ರಾಮೀಣ ಪ್ರದೇಶದ ರಸ್ತೆಗಳ ಸುಧಾರಣೆಯಿಂದ ಸಾರಿಗೆ ಸಂಪರ್ಕ ಸುಗಮವಾಗುತ್ತದೆ. ಎಲ್ಲ ಗ್ರಾಮಗಳ ಕೂಡು ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.

ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ 550 ಮೀಟರ್ ರಸ್ತೆ ನಿರ್ವಿುಸಲು ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಿಳವಳ್ಳಿ- ಬ್ಯಾಡಗಿ, ಕಾಗಿನೆಲೆ-ಬ್ಯಾಡಗಿ ಹಾಗೂ ಹಂಸಭಾವಿ ಕಡೆಗೆ ತೆರಳುವ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಎಲ್ಲ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಇನ್ನುಳಿದ ರಸ್ತೆಗಳನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಗ್ರಾಮೀಣ ಪ್ರದೇಶದ ಹೊಲಗಳಿಗೆ ತೆರಳುವ ರಸ್ತೆ ನಿರ್ವಿುಸಿಕೊಳ್ಳಲು ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶ ಕಲ್ಪಿಸಿದ್ದು, ಆಯಾ ಗ್ರಾಮಸ್ಥರು ಯೋಜನೆ ಬಳಸಿಕೊಳ್ಳಬೇಕು ಎಂದರು.

ಗುಡ್ಡದಮಲ್ಲಾಪುರ ಏತನೀರಾವರಿ ಯೋಜನೆ ವ್ಯಾಪ್ತಿಯ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಡಲಿದೆ. ಚಿಕ್ಕಬಾಸೂರು, ಹಿರೇಹಳ್ಳಿ, ದುಮ್ಮಿಹಾಳ, ಘಾಳಪೂಜಿ, ಹಿರೇಅಣಜಿ ಗ್ರಾಮಗಳು ಸೇರಿದಂತೆ ಹತ್ತಾರು ಹಳ್ಳಿಗಳ ಕೆರೆಗಳಿಗೆ ನೀರು ಹರಿಸಲಾಗಿದೆ. ರೈತರು ಭೂಸ್ವಾಧೀನ ಪರಿಹಾರ ಹಣ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿಗೆ ಕಾಲುವೆಯಲ್ಲಿ ನೀರು ಹರಿಯುವುದನ್ನು ಸ್ಥಗಿತಗೊಳಿಸುವುದು, ಕಾಲುವೆ ಒಡೆಯಲು ಯತ್ನಿಸುವುದು ಸೇರಿದಂತೆ ಇತರ ಹಾನಿಗೆ ಯತ್ನಿಸಬಾರದು. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಲಿದೆ. ಯಾವುದೇ ಸಮಸ್ಯೆಯಿದ್ದರೂ ನನ್ನನ್ನು ಸಂರ್ಪಸಿ ಎಂದು ಮನವಿ ಮಾಡಿದರು.

ಗ್ರಾ.ಪಂ. ಮಾಜಿ ಸದಸ್ಯರಾದ ಸಹದೇವಪ್ಪ ಬನ್ನಿಹಳ್ಳಿ, ಮೂಕಪ್ಪ ಅಂಗರಗಟ್ಟಿ, ಶೇಖಪ್ಪ ಕಾಶಿ, ಗುತ್ತಿಗೆದಾರ ಲಿಂಗರಾಜ ಚಪ್ಪರದಹಳ್ಳಿ, ಲೋಕೋಪಯೋಗಿ ಇಂಜಿನಿಯರ್ ಸುರೇಂದ್ರ ದೊಡ್ಡಮನಿ, ಇಂಜಿನಿಯರ್ ಎ.ಎಸ್. ಪಾಟೀಲ, ಪಿಡಿಒ ರಮೇಶ ಹುಲಸೋಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net