

ಸಿದ್ದಾಪುರ: ಕರೊನಾ ವೈರಸ್ ಹರಡದಂತೆ ತಾಲೂಕು ಆಡಳಿತ ಪಟ್ಟಣದಲ್ಲಿ ಫಾಸ್ಟ್ ಫುಡ್ ಅಂಗಡಿ ಮುಚ್ಚಿದಂತೆ ಗ್ರಾಮೀಣ ಭಾಗದಲ್ಲಿರುವ ಎಲ್ಲ ಫಾಸ್ಟ್ ಪುಡ್ ಅಂಗಡಿಗಳನ್ನೂ ಮುಚ್ಚುವಂತೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಿದೆ.
ತಾಲೂಕಿನ 23 ಗ್ರಾಪಂ ವ್ಯಾಪ್ತಿಯಲ್ಲಿ ಫಾಸ್ಟ್ ಫುಡ್, ಚಿಕನ್, ಮಟನ್ ಅಂಗಡಿ ಸೇರಿ ಸುಮಾರು ಎರಡು ನೂರಕ್ಕೂ ಹೆಚ್ಚು ಅಂಗಡಿಗಳಿದ್ದು, ಅವುಗಳೆಲ್ಲವನ್ನೂ ಮೂರು ದಿನದಿಂದ ಮುಚ್ಚಲು ಸೂಚಿಸಿದ್ದರಿಂದ ಜನತೆಯ ಓಡಾಟವೂ ಕಡಿಮೆ ಆಗಿದೆ. ಕೆಲವು ಗ್ರಾಪಂ ವ್ಯಾಪ್ತಿಯಲ್ಲಿರುವ ಅವ್ಯವಸ್ಥಿತ ಚರಂಡಿಗಳಲ್ಲಿ ಕೊಳಚೆ ನೀರು ನಿಂತಿರುವುದಲ್ಲದೆ, ಕಸದ ತೊಟ್ಟಿಗಳು ತುಂಬಿ ತುಳುಕುತ್ತಿವೆ. ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ತಹಸೀಲ್ದಾರ್ ಮಂಜುಳಾ ಭಜಂತ್ರಿ ಪಿಡಿಒಗಳಿಗೆ ಸೂಚಿಸಿದ್ದಾರೆ.
ಚೆಕ್ ಪೋಸ್ಟ್: ಶಿವಮೊಗ್ಗ ಜಿಲ್ಲೆ ಹಾಗೂ ಘಟ್ಟದ ಕೆಳಗಿನ ತಾಲೂಕುಗಳಿಗೆ ಮುಖ್ಯ ಸಂಪರ್ಕ ಕೇಂದ್ರವಾಗಿರುವ ಮಾವಿನಗುಂಡಿಯಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ನಲ್ಲಿಯೇ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಚೆಕ್ ಪೋಸ್ಟ್ ಆರಂಭಿಸಿದ್ದು, ಇಲ್ಲಿ ಹಾದು ಹೋಗುವ ಎಲ್ಲ ವಾಹನಗಳಲ್ಲಿನ ಪ್ರವಾಸಿಗರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುತ್ತದೆ. ಹೊರಗಡೆಯಿಂದ ಬಂದ ಪ್ರವಾಸಿಗರ ಕುರಿತು ಹೆಚ್ಚು ನಿಗಾ ಇಡಲಾಗುತ್ತಿದೆ. ಯಾವುದೇ ಪ್ರಯಾಣಿಕರಲ್ಲಿ ಅನಾರೋಗ್ಯ ಕಂಡು ಬಂದಲ್ಲಿ ಅಂಥವರಿಗೆ ಸೂಕ್ತ ಚಿಕಿತ್ಸೆಗೆ ಒಳಪಡಿಸಲಾಗುವುದು. ಈ ಚೆಕ್ ಪೋಸ್ಟ್ನಲ್ಲಿ ಒಬ್ಬ ಆರೋಗ್ಯಾಧಿಕಾರಿ, ಪೊಲೀಸ್ ಸಿಬ್ಬಂದಿ ಅವರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಮಾವಿನಗುಂಡಿ ಚೆಕ್ ಪೋಸ್ಟ್ನಲ್ಲಿ ಹಗಲು ಹಾಗೂ ರಾತ್ರಿ ಪ್ರಯಾಣಿಕರನ್ನು ಪರೀಕ್ಷೆ ನಡೆಸುವುದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. | ಮಂಜುಳಾ ಎಸ್. ಭಜಂತ್ರಿ ತಹಸೀಲ್ದಾರ್ ಸಿದ್ದಾಪುರ