

ಹನೂರು: ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಬುಧವಾರ ಆಯೋಜಿಸಿದ್ಧ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಯ ಸುರಿಮಳೆಯನ್ನೇ ಸುರಿಸಿದರು.
ಗ್ರಾಪಂ ಮುಂಭಾಗದಲ್ಲಿ ಬೆಳಗ್ಗೆ 11.30ರಲ್ಲಿ ಅಧ್ಯಕ್ಷೆ ರಂಗಮ್ಮ ಅಧ್ಯಕ್ಷತೆಯಲ್ಲಿ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು. ಆದರೆ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾಗಿದ್ದ ಹಿನ್ನೆಲೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭೆಯಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಸಭೆ ಆರಂಭವಾಗಿ ನರೇಗಾ ತಾಲೂಕು ಸಂಯೋಜಕ ನಾರಾಯಣ್ ಮಾತನಾಡುತ್ತಿದ್ದಂತೆಯೇ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ದೂರಲು ಆರಂಭಿಸಿದರು.
ಗಾಣಿಗಮಂಗಲ ಗ್ರಾಮದ ಕರಿಯಪ್ಪ ಎಂಬುವರು ಮಾತನಾಡಿ, ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನರು ವಾಸಿಸುತ್ತಿದ್ದು, 1,400 ಕೂಲಿ ಕಾರ್ಮಿಕರಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ನರೇಗಾ ಯೋಜನೆಯಡಿ ಜನರಿಗೆ ಉದ್ಯೋಗ ನೀಡುತ್ತಿಲ್ಲ. ಇದರಿಂದ ಜನರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಮುಖ್ಯ ರಸ್ತೆಯ ಬದಿಯಲ್ಲಿ ಬೆಳೆದು ನಿಂತಿರುವ ಲಂಟಾನೆಯನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ. ಜನರು ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಇನ್ನು ಮುಂದಾದರೂ ಗಮನಹರಿಸಬೇಕು. ಕೃಷಿ ಇಲಾಖೆ ನೀಡಿರುವ ಬಿತ್ತನೆ ರಾಗಿ ಕಳಪೆಯಿಂದ ಕೂಡಿದ್ದು, ಪೈರುಗಳು ಸಮರ್ಪಕವಾಗಿ ಬಂದಿಲ್ಲ. ಈಗೀರುವಾಗ ಸಂಬಂಧಪಟ್ಟ ಅಧಿಕಾರಿಗಳು ಸಭೆ ಆಗಮಿಸದಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಗಾಣಿಗಮಂಗಲದ ವಲಸಾಲೆಗೌಡ ಮಾತನಾಡಿ, ಬೀದಿಯ ಚರಂಡಿಗೆ ಡೆಕ್ ನಿರ್ಮಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಜನರು ಓಡಾಡಲು ತೊಂದರೆ ಪಡುವಂತಾಗಿದೆ ಎಂದು ದೂರಿದರು.
ಶಾಗ್ಯ ಗ್ರಾಮದ ಮಲ್ಲೇಶ್ ಮಾತನಾಡಿ, ಈ ಭಾಗದಲ್ಲಿ ಸಾವಿರ ಅಡಿ ಬೋರ್ ಕೊರೆಸಿದರೂ ಅಂತರ್ಜಲ ಮಟ್ಟ ಕುಸಿತದ ಪರಿಣಾಮ ನೀರು ಸಿಗುತ್ತಿಲ್ಲ. ಗ್ರಾಮದ ಹಳ್ಳಕ್ಕೆ ಚೆಕ್‌ಡ್ಯಾಂ ನಿರ್ಮಿಸುವಂತೆ ಒತ್ತಾಯಿಸಿದರು. ಪುಷ್ಪಾಪುರ ಗ್ರಾಮದ ಮುತ್ತು ಮಾತನಾಡಿ, ಗ್ರಾಮದಲ್ಲಿ ತಲೆದೂರಿರುವ ನೀರಿನ ಸಮಸ್ಯೆ ನಿವಾರಿಸುವಂತೆ ಹಾಗೂ ರಸ್ತೆ ನಿರ್ಮಿಸುವಂತೆ ತಿಳಿಸಿದ್ದರೂ ಕಿಂಚಿತ್ತೂ ಗಮನಹರಿಸುತ್ತಿಲ್ಲ ಎಂದು ದೂರಿದರು. ಇದೇ ವೇಳೆ ಹಲವರು ಸಮಸ್ಯೆಯ ಬಗ್ಗೆ ದೂರಿದರು. ಇದರಿಂದ ಆಯೋಜಿಸಿದ್ಧ ಸಭೆಯು ಸಮಸ್ಯೆಗಳ ಗೊಂದಲದ ಗೂಡಾಯಿತು.
ಬಳಿಕ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರೂ ರಸ್ತೆ ಬದಿಯ ಲಂಟಾನೆ ತೆರವಿಗೆ ಈಗಾಗಲೇ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಪಿಡಿಒ ಸಿದ್ದಪ್ಪ ಅವರು ಗಾಣಿಗಮಂಲದಲ್ಲಿ 2 ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ಪೊನ್ನಮ್ಮ, ವೆಂಕಟಲಕ್ಷ್ಮೀ, ಮಹಾದೇವಿ, ಕುಪ್ಪುಸ್ವಾಮಿ, ಯೋಗೇಶ್, ಮಂಜು, ನಾಗರಾಜು ಹಾಗೂ ಇನ್ನಿತರರು ಇದ್ದರು.
ಫೋಟೋ
24 ಹನೂರು 2
ಶಾಗ್ಯ ಗ್ರಾಮದಲ್ಲಿ ಆಯೋಜಿಸಿದ್ಧ ನರೇಗಾ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು. ರಂಗಮ್ಮ, ಮಹದೇವಮ್ಮ, ನಾರಾಯಣ್, ಸಿದ್ದಪ್ಪ ಇತರರು ಇದ್ದರು.