

ಸಾಲಿಗ್ರಾಮ: ಗ್ರಾಮದ ಮಾಳಮ್ಮ ಮತ್ತು ಶ್ರೀ ಲಕ್ಷ್ಮೀ ದೇವಿ ದೇವಸ್ಥಾನ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯರ ಅನುದಾನದಡಿ 5 ಲಕ್ಷ ರೂ.ಅನುದಾನ ಕೊಡಿಸುತ್ತೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಭರವಸೆ ನೀಡಿದರು.
ಅಂಕನಹಳ್ಳಿ ಗ್ರಾಮದಲ್ಲಿ ನಂತನವಾಗಿ ನಿರ್ಮಿಸಿದ ಮಾಳಮ್ಮ ತಾಯಿ ದೇವಸ್ಥಾನ ಉದ್ಘಾಟನೆ ಮತ್ತು ಮಾಳಮ್ಮ ದೇವಿಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವಾಲಯ ಕಟ್ಟಿಸಿದರೆ ಸಾಲದು. ದೇವರ ಜತೆಗೆ ನಮ್ಮ ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸಿದಾಗ ಮಾತ್ರ ದೇವರನ್ನು ಪೂಜಿಸಿದಷ್ಟೇ ಪುಣ್ಯ ದೊರೆಯಲಿದೆ. ಜನರ ನೆಮ್ಮದಿಗಾಗಿ ಗ್ರಾಮಗಳಲ್ಲಿ ದೇವಸ್ಥಾನಗಳು ನಿರ್ಮಾಣವಾಗಬೇಕು ಎಂದರು.
ಇಂದಿನ ದಿನಗಳಲ್ಲಿ ಕೆಲವರ ನಡವಳಿಕೆಯನ್ನು ಗಮನಿಸಿದಾಗ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬ ಪ್ರಶ್ನೆ ಹುಟ್ಟುತ್ತದೆ. ಏಕೆಂದರೆ ಜತೆಯಲ್ಲೇ ಇದ್ದು ಜತೆಯಲ್ಲೇ ತಿಂದು ಮೋಸ ಮಾಡುತ್ತಾರೆ ಎಂದರೆ ಅದನ್ನು ಆ ಭಗವಂತನೇ ನೋಡಿಕೊಳ್ಳಬೇಕು. ನಾನು ಸೋತ ಮೇಲೆ ನೆಮ್ಮದಿಯಾಗಿದ್ದೇನೆ. ಕುಟುಂಬದೊಂದಿಗೆ ಆರಾಮಾಗಿದ್ದೇನೆ. ಪಕ್ಷಕ್ಕಾಗಿ ದುಡಿದಂತ ನಿಮ್ಮಂತಹ ನಿಷ್ಠಾವಂತ ಕಾರ್ಯಕರ್ತರ ಕಷ್ಟ-ಸುಖಗಳನ್ನು ನಿತ್ಯ ಕೇಳುತ್ತಾ ನಿಮ್ಮ ಋಣ ತೀರಿಸುವುದೇ ನನ್ನ ಜವಾಬ್ದಾರಿ ಎಂದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬ ಮನುಷ್ಯನ ಆತ್ಮದಲ್ಲೂ ಭಗವಂತನಿದ್ದಾನೆ. ನಾವು ಮಾಡುವ ತಪ್ಪು ಮತ್ತು ಒಳ್ಳೆಯ ಕೆಲಸಗಳನ್ನು ಎಚ್ಚರಿಸುವ ಕೆಲಸ ನಮ್ಮ ಮನಸ್ಸು ಮಾಡುತ್ತಿರುತ್ತದೆ. ಆದರೆ, ಆತ್ಮ ಸಾಕ್ಷಿಯಾಗಿ ಒಳ್ಳೆಯ ಕೆಲಸಗಳು ನಮಗೆ ಯಶಸ್ಸು ಕೊಡುತ್ತದೆ. ನಮ್ಮ ಮನಸ್ಸಿಗೆ ವಿರುದ್ಧವಾಗಿ ಮಾಡಿದ ಕೆಲಸಗಳು ನಮಗೆ ಮುಂದೆ ನರಕವಾಗುತ್ತದೆ. ಆಗ ನಾವು ನಮ್ಮ ಮನಸ್ಸನ್ನು ಮತ್ತೆ ನೆನಪಿಸಿಕೊಳ್ಳುತ್ತೇವೆ. ಆದ್ದರಿಂದ ಯೋಚಿಸಿ ಕೆಲಸ ಮಾಡುವುದು ಒಳ್ಳೆಯದು ಎಂದರು.
ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್, ನಿವೃತ್ತ ವೈದ್ಯಾಧಿಕಾರಿ ಸಣ್ಣ ತಮ್ಮೇಗೌಡ, ನಿವೃತ್ತ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸುಬ್ರಾಯ ಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧುಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ಉಮೇಶ್ ಪೂಜಾರಿ, ವೈದ್ಯಾಧಿಕಾರಿ ಡಾ.ಚಂದ್ರಕಲಾ, ಮುಖಂಡರಾದ ರಾಮಲಿಂಗೇಗೌಡ, ವಕೀಲ ತಿಮ್ಮಪ್ಪ, ಪಿಡಿಒ ನವೀನ್, ಮಧು, ಜನಾರ್ಧನ್, ಸತೀಶ್ ಭಾಗವಹಿಸಿದ್ದರು.