

ಕೆ.ಎಂ.ದೊಡ್ಡಿ: ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸಂಕಲ್ಪ ತೊಟ್ಟು ಮೂಲಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸಲಹೆ ನೀಡಿದರು.
ಇಲ್ಲಿನ ಭಾರತೀ ವಿದ್ಯಾಸಂಸ್ಥೆಯ ಆಡಳಿತ ಕಚೇರಿಯಲ್ಲಿ ಮೆಣಸಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಪಾರ್ವತಮ್ಮ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಯೇ ಸುಪ್ರೀಂ ಆಗಿದ್ದು ಮೊದಲು ಮೂಲಸೌರ್ಕಯಗಳನ್ನು ಕಲ್ಪಿಸಲು ನೆರವಾಗಿ ಎಂದರು.
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅಭಿವೃದ್ಧಿ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಗ್ರಾಮಗಳ ಅಭಿವೃದ್ಧಿಯಾಗಲಿವೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಿ ಉಳಿದ ಸಂದರ್ಭದಲ್ಲಿ ಅಭಿವೃದ್ಧಿ ಮಂತ್ರ ಜಪಿಸಿ ಎಂದು ಕಿವಿಮಾತು ಹೇಳಿದರು.
ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಯ ಅನುದಾನ ನೆರವಾಗಲಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗ್ರಾಮಗಳಿಗೆ ಕುಡಿಯುವ ನೀರು, ಶೌಚಗೃಹ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ ಮಾತನಾಡಿ, ನನ್ನನ್ನು ಅಧ್ಯಕ್ಷನಾಗಿ ಮಾಡಲು ಸಹಕರಿಸಿದ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರಿಗೆ ನಾನು ಚಿರಋಣಿಯಾಗಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದು ಅದಕ್ಕೆ ಕಳಂಕ ಬಾರದಂತೆ ಕಾರ್ಯನಿರ್ವಹಿಸುತ್ತೇನೆ ಎಂದರು.
ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಮಾಜಿ ಅಧ್ಯಕ್ಷ ಎಂ.ಕೆ.ಮಹದೇವು, ಫಾರ್ಮ್ ರಾಜು, ಉಪಾಧ್ಯಕ್ಷ ಮಡೇನಹಳ್ಳಿ ಸ್ವಾಮಿ, ಸದಸ್ಯರಾದ ಬೊಪ್ಪಸಮುದ್ರ ಅಜಯ್, ಪುಷ್ಪ ಗಿರೀಶ್ ಮುಖಂಡರಾದ ದೇವೇಗೌಡನದೊಡ್ಡಿ ನಾಡಗೌಡ ಸೋಮು, ಪ್ರಮೋದ್, ರಾಜಣ್ಣ, ಆಲೂರಯ್ಯ, ಮಂಜು, ಬೊಪ್ಪಸಮುದ್ರ ಸ್ವಾಮಿ, ತೊರೆಬೊಮ್ಮನಹಳ್ಳಿ ರಮೇಶ್ ಮತಿತ್ತರಿದ್ದರು.