

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಮನೆ, ಮಠ ತ್ಯಾಗ ಮಾಡಿದ ಸಂತ್ರಸ್ತರು ಪುನರ್ ವಸತಿ ಕೇಂದ್ರಗಳಿಗೆ ಸ್ಥಳಾಂತರವಾಗಿದ್ದಾರೆ. ಅವರ ಸಮಸ್ಯೆ ಇತ್ಯರ್ಥ ಪಡಿಸುವುದು ನಮ್ಮ ಜವಾಬ್ದಾರಿ. ಅಽಕಾರಿಗಳು ಗ್ರಾಮ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಗಳ ಪುನರ್ ವಸತಿ ಕೇಂದ್ರಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳಲು ನಿರಂತರ ಪ್ರಯತ್ನ ಅಗತ್ಯವಾಗಿದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪುನರ್ ವಸತಿಗಳಲ್ಲಿ ಸಮಸ್ಯೆಗಳು ಬಹಳಷ್ಟು ಇವೆ. ಸಂತ್ರಸ್ತರು ನಿತ್ಯವು ನೋವಿನಲ್ಲಿ ಕಾಲ ಕಳೆಯುತ್ತಿದ್ದಾರೆ. ೧೯೮೪ರಿಂದ ಮುಳುಗಡೆಯಾದ ವಿಧಾನಸಭಾ ಕ್ಷೇತ್ರದ ಗ್ರಾಮಗಳ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಜನರು ಮೂಲ ಸೌಕರ್ಯಗಳು ಇಲ್ಲದೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಬಗ್ಗೆ ಗಮನ ಹರಿಸಿ ಪ್ರಥಮ ಆದ್ಯತೆಯಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಜೆ.ಟಿ.ಪಾಟೀಲ, ನಮ್ಮ ಬೀಳಗಿ ಮತಕ್ಷೇತ್ರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ರಸ್ತೆ, ಚರಂಡಿ, ಶಾಲೆ, ಆರೋಗ್ಯ ಕೇಂದ್ರ ಸೇರಿದಂತೆ ಮೂಲ ಸೌಕರ್ಯಗಳು ಇಲ್ಲವಾಗಿದೆ. ಕಲಾದಗಿ ಮುಳುಗಡೆಯಾಗಿ ೨೦ ವರ್ಷಗಳಾದರೂ ಪೂರ್ಣ ಪ್ರಮಾಣದಲ್ಲಿ ಹಕ್ಕುಪತ್ರಗಳ ವಿತರಣೆಯಾಗಿಲ್ಲ. ಕಲಾದಗಿ ಅಭಿವೃದ್ಧಿಗೆ ಬಂದ ಅನುದಾನ ವಾಪಸ್ ಹೋಗುತ್ತಿದೆ. ಸರಿಯಾದ ನಿರ್ಣಯ ತೆಗೆದುಕೊಳ್ಳದಿದ್ದರೆ ಏನು ಉಪಯೋಗ ಎಂದು ಖಾರವಾಗಿ ಪ್ರಶ್ನಿಸಿದರು.
ಪದವಿ ಕಾಲೇಜು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ೧೦ ಎಕರೆ ಜಮೀನಿಗೆ ಮನವಿ ಮಾಡಲಾಗಿದೆ. ಇಲ್ಲಿಯವರೆಗೂ ಕೊಟ್ಟಿಲ್ಲ. ಕೂಡಲೇ ಮಂಜೂರು ಮಾಡಬೇಕು. ಪುನರ್ ವಸತಿ ಕೇಂದ್ರಗಳ ಸಮಸ್ಯ ಪರಿಹಾರಕ್ಕೆ ವಿಶೇಷ ಅನುದಾನ, ಕಾಳಜಿ ವಹಿಸಬೇಕಿದೆ ಎಂದು ಹೇಳಿದರು.
ಸಚಿವ ಆರ್.ಬಿ. ತಿಮ್ಮಾಪುರ, ಸಶ್ಮಾನಕ್ಕೆ ಜಾತಿ ಆಧಾರದ ಮೇಲೆ ಜಾಗ ಮೀಸಲಾಗಿಟ್ಟಿದ್ದೀರಾ? ಎಂಬ ಪ್ರಶ್ನೆಗೆ ಅಧಿಕಾರಿಗಳು ಇಲ್ಲ ಎಂದರು. ಸಾವಿರ ಜನ ಸಂಖ್ಯೆ ಇದ್ದರೆ ಎಷ್ಟು ಸ್ಮಶಾನಕ್ಕೆ ಎಷ್ಟು ಜಾಗ ಬೇಕಾಗುತ್ತದೆ ಎಂಬ ಪ್ರಶ್ನೆಗೂ ಉತ್ತರ ಬರಲಿಲ್ಲ. ಜನ ಸಾಮಾನ್ಯರಿಗೆ ಗೊತ್ತಾಗುವುದು, ನಿಮಗೆ ಗೊತ್ತಾಗುವುದಿಲ್ಲ ಎಂದರೆ ಹೇಗೆ? ವೈಜ್ಞಾನಿಕವಾಗಿ ಪ್ರಸ್ತಾವ ಸಲ್ಲಿಸಿ ಎಂದು ಸೂಚಿಸಿದರು.
ಜನ ವಸತಿ ಇಲ್ಲದ ಗ್ರಾಮಗಳಲ್ಲಿ ಕಾಮಗಾರಿ ತೆಗೆದುಕೊಳ್ಳುವುದಕ್ಕಿಂತ ಜನ ವಸತಿ ಇದ್ದೂ ಸೌಲಭ್ಯಗಳಿಲ್ಲದ ಗ್ರಾಮಗಳಲ್ಲಿ ಕಾಮಗಾರಿ ತೆಗೆದುಕೊಳ್ಳಿರಿ ಎಂದು ಹೇಳಿದರು.
ಶಾಸಕರಾದ ಎಚ್.ವೈ. ಮೇಟಿ, ಜಗದೀಶ ಗುಡಗುಂಟಿ, ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮ್ಮದ್ ಮೊಹಸಿನ್, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಸಿಇಒ ಶಶಿಧರ ಕುರೇರ ಇದ್ದರು.