

ಯಲ್ಲಾಪುರ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸ್ಥಳೀಯ ಆಡಳಿತ ಬಿಜೆಪಿ ತೆಕ್ಕೆಗೆ ಬಂದಿದ್ದು, ಸಿದ್ದಾಪುರ ಹಾಗೂ ಹೊನ್ನಾವರಗಳಲ್ಲಿಯೂ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ನಾಯಕ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಬಿಜೆಪಿ ಗೆಲುವು ಮುಂದಿನ ಗ್ರಾ.ಪಂ. ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.
ಮಹಾರಾಷ್ಟ್ರದಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರನ್ನು ಅಮಾನವೀಯ ರೀತಿಯಲ್ಲಿ ಬಂಧಿಸಿರುವ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.
ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಈ ಬಾರಿ ಮಹಿಳೆಯರೇ ಪಾರುಪತ್ಯ ಮೆರೆದಿದ್ದಾರೆ. ಯಲ್ಲಾಪುರದಲ್ಲಿ ಇಬ್ಬರೂ ಮಹಿಳೆಯರೇ ಅಧಿಕಾರ ಪಡೆದಿದ್ದಾರೆ. ಈ ಗೆಲುವು ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಸಿದೆ ಎಂದರು. ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಡಾ.ರವಿ ಭಟ್ಟ ಬರಗದ್ದೆ, ಪ್ರಸಾದ ಹೆಗಡೆ ಇದ್ದರು.