ಗ್ರಾಮ ಆಡಳಿತಾಧಿಕಾರಿಗಳ ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ

Published on

ನಾಗಮಂಗಲ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಕಾಲ ನಡೆಸುತ್ತಿರುವ ಪ್ರತಿಭಟನೆಗೆ ದಲಿತ ಸಂಘಟನೆ, ಅಲ್ಪಸಂಖ್ಯಾತರ ಸಂಘಟನೆ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಾದ್ಯಂತ ಗ್ರಾಮ ಆಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಕಾಲ ನಡೆಸುತ್ತಿರುವ ಪ್ರತಿಭಟನೆಗೆ ದಲಿತ ಸಂಘಟನೆ ಮುಖಂಡ ಬೆಳ್ಳೂರು ವೆಂಕಟೇಶ್ ಬೆಂಬಲ ಸೂಚಿಸಿ ಮಾತನಾಡಿ, ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳನ್ನು ಜೀತಕ್ಕಿರಿಸಿಕೊಂಡಿದೆ. ಸರ್ಕಾರ ಜೀತ ಮುಕ್ತ ಮಾಡುತ್ತೇನೆ ಎಂದು ಘೋಷಣೆ ಮಾಡಿ ಸರ್ಕಾರದ ಅಧಿಕಾರಿಗಳನ್ನೇ ಜೀತಕ್ಕಿರಿಸಿಕೊಂಡಿರುವುದು ನಿಜಕ್ಕೂ ದುರಂತವೆನಿಸುತ್ತದೆ. ಗ್ರಾಮ ಆಡಳಿತಾಧಿಕಾರಿಗಳಿಗೆ ಕಾರ್ಯದೊತ್ತಡವನ್ನೇರುವ ಮೂಲಕ ಸರ್ಕಾರದ ನಿರ್ಧಿಷ್ಟ ಸಮಯದಲ್ಲಿ ಕೆಲಸ ಮಾಡಿಸಿಕೊಳ್ಳದೆ ಹಗಲು-ರಾತ್ರಿ ಎನ್ನದೆ ಕೆಲಸದೊತ್ತಡ ಹಾಕಿ ಸರ್ಕಾರದ ಎಲ್ಲ ಯೋಜನೆಗಳ ಕಾರ್ಯದೊತ್ತಡವನ್ನು ಅವರ ಮೇಲೆ ಹಾಕುವ ಮೂಲಕ ಪರೋಕ್ಷವಾಗಿ ಜೀತ ಪದ್ಧತಿಯನ್ನು ಜೀವಂತವಾಗಿರಿಸುವ ಕೆಲಸ ಮಾಡುತ್ತಿದೆ.

ಸ್ವಾತಂತ್ರೃ ಬಂದು 75 ವರ್ಷಗಳು ಕಳೆದರೂ ತಳಮಟ್ಟದಲ್ಲಿ ಜನರ ಕೆಲಸ ಮಾಡುತ್ತಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಒಂದು ವ್ಯವಸ್ಥಿತ ನೆಲೆ ಕಲ್ಪಿಸಿಕೊಡುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ. ಕನಿಷ್ಠ ಮೂಲಸೌಲಭ್ಯಗಳನ್ನು ನೀಡದಿರುವ ಸರ್ಕಾರ ಕೇಂದ್ರ ಸ್ಥಾನದಲ್ಲಿರಬೇಕು ಎಂದು ಆದೇಶ ಮಾಡಿರುವುದನ್ನು ನೋಡಿದರೆ ನಿಜಕ್ಕೂ ಇದು ಕುರುಡು ಸರ್ಕಾರ ಎಂಬ ಭಾವನೆ ಮೂಡುತ್ತದೆ. ಗ್ರಾಮ ಆಡಳಿತಾಧಿಕಾರಿಗಳು ಕಳೆದ 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಇವರ ಕಡೆ ಗಮನಹರಿಸದಿರುವುದು ಸರ್ಕಾರದ ಬೇಜವಾಬ್ದಾರಿಯನ್ನು ತೋರ್ಪಡಿಸುತ್ತದೆ. ಕೂಡಲೇ ಸರ್ಕಾರ ಇವರ ಸಮಸ್ಯೆಗೆ ಸ್ಪಂದಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಭ್ರಷ್ಟಾಚಾರ ನಿಗ್ರಹ ದಳ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ನದೀಂ ಪಾಷ ಮಾತನಾಡಿ, ಎಲ್ಲ ಯೋಜನೆಗಳನ್ನು ಡಿಜಿಟಲೀಕರಣ ಮಾಡುತ್ತಿದ್ದೇವೆ ಎನ್ನುವ ಸರ್ಕಾರ ಮೊದಲು ಸಿಬ್ಬಂದಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಆನಂತರ ಈ ರೀತಿಯ ಆದೇಶಗಳನ್ನು ಮಾಡಲಿ. ಸರ್ಕಾರದ ಒತ್ತಡದಿಂದ ಎಷ್ಟೊ ಜನ ಅಧಿಕಾರಿಗಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ, ಮತ್ತೆ ಕೆಲವರು ಮರಣ ಹೊಂದಿದ್ದಾರೆ. ಈ ಎಲ್ಲ ಹೊಣೆಯನ್ನು ಸರ್ಕಾರವೇ ಹೊರಬೇಕಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಿರಸ್ತೇದಾರ್ ಉಮೇಶ್ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮ ಆಡಳಿತಾಧಿಕಾರಿಗಳಾದ ಸಂತೋಷ್, ತೇಜಸ್ವಿನಿ, ಮಣಿಕಂಠ, ಈರಣ್ಣ, ಕರ್ಣ, ನವೀನ್, ಲೋಹಿತ್, ಬಸವರಾಜು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net