ಗ್ರಾಪಂಗಳು ತ್ಯಾಜ್ಯ ಘಟಕ ಸದ್ಬಳಕೆ ಮಾಡಿಕೊಳ್ಳಲಿ

16 yelandur 01
Published on

ಯಳಂದೂರು: ಪಟ್ಟಣ ಪಂಚಾಯಿತಿ ವತಿಯಿಂದ ಸಮೀಪದ ಮೂಡಲ ಅಗ್ರಹಾರ ಗ್ರಾಮದ ಸರ್ವೇ ನಂ.89ರಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಘನತ್ಯಾಜ್ಯ ನಿರ್ವಹಣಾ ಘಟಕದ ಉಪಯೋಗವನ್ನು ಅಕ್ಕಪಕ್ಕದ ಗ್ರಾಮ ಪಂಚಾಯಿತಿಯವರು ಪಡೆದುಕೊಳ್ಳಬಹುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ಘಟಕದ ಮುಂದುವರಿದ (1.66 ಕೋಟಿ ರೂ.ವೆಚ್ಚ) ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಹಿಂದಿನ ಸರ್ಕಾರದ ಅವಧಿಯಲ್ಲೇ ಅಂದಿನ ಜಿಲ್ಲಾಧಿಕಾರಿ ಕಾವೇರಿ ಅವರು 9 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿದ್ದರು. ಇದು ಕುದೇರು ಗ್ರಾಪಂಗೆ ಸೇರಿದ ಜಮೀನಾಗಿದೆ. ಯಳಂದೂರು ಪಟ್ಟಣ ಪಂಚಾಯಿತಿಯಿಂದ ದೂರವಿರುವ ಈ ಸ್ಥಳದಲ್ಲಿ ಇದರ ನಿರ್ಮಾಣಕ್ಕೆ ಆಗಲೇ ವಿರೋಧವಿತ್ತು. ಆದರೂ ಇಲ್ಲಿ ಕಾಮಗಾರಿ ಆರಂಭವಾಗಿತ್ತು. ಇದು ಸರ್ಕಾರಿ ಜಮೀನಾಗಿದೆ. ಈ ಹಿಂದೆ ನಿಗದಿಯಾಗಿ ಆರಂಭಗೊಂಡಿರುವ ಮುಂದುವರಿದ ಕಾಮಗಾರಿ ಇದಾಗಿದೆ. ಈಗ ಸುತ್ತುಗೋಡೆ ಸೇರಿದಂತೆ ಇತರ ಕೆಲಸಗಳು ಆರಂಭಗೊಂಡಿವೆ. ಈಗ 2ನೇ ಹಂತದಲ್ಲಿ ಮುಂದುದರಿದ ಕಾಮಗಾರಿಯಾಗಿ ಕಾಂಪೌಂಡ್, ಗೇಟ್ ನಿರ್ಮಾಣ, ಇಂಟರ್‌ನಲ್ ರಸ್ತೆ, ಚರಂಡಿ, ಡೆಕ್ ಸ್ಲಾಬ್, ಕಚೇರಿ, ಶೌಚಗೃಹ ನಿರ್ಮಾಣ, ವೇ ಬ್ರಿಡ್ಜ್‌ಗೆ ತಳಪಾಯ, ಸೋಕ್‌ಪಿಟ್, ಸೆಪ್ಟಿಕ್ ಟ್ಯಾಂಕ್, ರ‌್ಯಾಂಪ್, ಏರೋಬಿಕ್ ಕಾಂಪೋಸ್ಟಿಂಗ್ ಪ್ಯಾಡ್, ಟ್ರಸ್ ನಿರ್ಮಾಣ, ಸ್ಟೋರೇಜ್ ಶೆಡ್, ಲೀಚೆಟ್ ಟ್ಯಾಂಕ್ ಹಾಗೂ ಏರೋಬಿಕ್ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇಲ್ಲಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಇದನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತದೆ. ಅಕ್ಕಪಕ್ಕದಲ್ಲಿರುವ ಕುದೇರು, ದೇಮಳ್ಳಿ ಸೇರಿದಂತೆ ಇತರ ಪಂಚಾಯಿತಿಯವರು ತಮ್ಮಲ್ಲಿ ಉತ್ಪತ್ತಿಯಾಗುವ ಕಸವನ್ನು ಇಲ್ಲಿಗೆ ತಂದು ಸಂಸ್ಕರಿಸಲು ಅವಕಾಶವಿದೆ. ಹಾಗಾಗಿ ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಪಂ ಅಧ್ಯಕ್ಷೆ ಲಕ್ಷ್ಮೀಮಲ್ಲು, ಸದಸ್ಯರಾದ ವೈ.ಜಿ.ರಂಗನಾಥ, ಬಿ.ರವಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಇಇ ಅಪ್ತಾಫ್ ಪಾಷ, ಜೆಇ ನಾಗೇಂದ್ರ, ಆರೋಗ್ಯಾಧಿಕಾರಿ ಮನೋಜ್, ಮಲ್ಲಿಕಾರ್ಜುನ, ರಘು, ಅರವಿಂದ, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ರಾಜಶೇಖರ್, ಚೇತನ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net