ಗ್ರಾಪಂಗಳಿಗೆ ಕೆರೆಗಳ ಹಸ್ತಾಂತರ ನನೆಗುದಿಗೆ!

0102
Published on

ಮಂಜುನಾಥ ಕೋಳಿಗುಡ್ಡ ಬೆಳಗಾವಿ

ಸಂರಕ್ಷಣೆ, ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಒಡೆತನದಲ್ಲಿರುವ ದೊಡ್ಡ ಪ್ರಮಾಣದ ಕೆರೆಗಳನ್ನು ಗ್ರಾಪಂಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ದೊಡ್ಡ ಕೆರೆಗಳನ್ನು ಗ್ರಾಪಂಗಳಿಗೆ ಬಿಟ್ಟುಕೊಡಲು ನೀರಾವರಿ ಇಲಾಖೆ ಹಿಂದೇಟು ಹಾಕುತ್ತಿದೆ.

ಅಂತರ್ಜಲ ವೃದ್ಧಿ, ಕೆರೆಗಳ ಒತ್ತುವರಿ ತಡೆಗಟ್ಟುವುದು, ಸಂರಕ್ಷಣೆ ಹಾಗೂ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ 100 ಎಕರೆಗಿಂತ ಕಡಿಮೆ ವಿಸ್ತೀರ್ಣವುಳ್ಳ ಸಣ್ಣ ನೀರಾವರಿ ಇಲಾಖೆಯ ಕೆರೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಿ ರೈತರು, ಸಾರ್ವಜನಿಕರ ಬಳಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾವಿರಾರು ಕೆರೆಗಳನ್ನು ಗ್ರಾಪಂಗಳಿಗೆ ಹಸ್ತಾಂತರಿಸಲು 2022-23ನೇ ಸಾಲಿನಲ್ಲೇ ಸರ್ಕಾರ ಯೋಜನೆ ರೂಪಿಸಿತ್ತು. ಆದರೆ, ಇಲಾಖೆಗಳ ಸಮನ್ವತೆ, ನೀರಾವರಿ ಇಲಾಖೆ ಒಪ್ಪಿಗೆ ನೀಡದಿರುವ ಕಾರಣ ಹಸ್ತಾಂತರ ಪ್ರಕ್ರಿಯೆ ಆರಂಭದಲ್ಲೇ ಉಳಿದುಕೊಂಡಿದೆ.

ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 100 ಎಕರೆಗಿಂತ ಕಡಿಮೆ ವಿಸ್ತೀರ್ಣವುಳ್ಳ 12 ಸಾವಿರಕ್ಕೂ ಅಧಿಕ ಕೆರೆಗಳಿವೆ. ಬಹುತೇಕ ಕೆರೆಗಳು ನಿರ್ವಹಣೆ ಇಲ್ಲದೆ ಅಳಿನಂತಿನಲ್ಲಿದ್ದರೆ, ಅನೇಕ ಕೆರೆಗಳು ಒತ್ತುವರಿಯಾಗಿವೆ. ಇವುಗಳನ್ನು ಸಮಗ್ರ ಅಭಿವೃದ್ಧಿಪಡಿಸಿ ಮಳೆ ನೀರು ಸಂಗ್ರಹಿಸಿ ಸಾರ್ವಜನಿಕರ ಬಳಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಯೋಜನೆ ರೂಪಿಸಿದ್ದು, ಆಯಾ ಜಿಪಂಗಳು ಅಂತಹ ಕೆರೆಗಳನ್ನು ಗುರುತಿಸಿ ಸರ್ಕಾರಕ್ಕೆ ಮಾಹಿತಿ ನೀಡಿವೆ. ಆದರೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಹಸ್ತಾಂತರ ಪ್ರಕ್ರಿಯೆ ಆರಂಭಗೊಂಡಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ರಾಜ್ಯ ಸರ್ಕಾರ 2018-19ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತಂದು ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕೆರೆಗಳಲ್ಲಿ ತುಂಬಿರುವ ಹೂಳೆತ್ತಲು ‘ಕೆರೆ ಸಂಜೀವಿನಿ’ ಯೋಜನೆ ಘೋಷಿಸಿ 100 ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು. ಆದರೆ, 2019ರಲ್ಲಿ ಅತಿವೃಷ್ಟಿ, ಕರೊನಾ ಇತರ ಕಾರಣಗಳಿಂದ ಕೆರೆ ಸಂಜೀವಿನಿ ಯೋಜನೆ ಅರ್ಧದಲ್ಲಿಯೇ ಮೊಟಕುಗೊಂಡಿತ್ತು. ಬಳಿಕ ಆರ್ಥಿಕ ಸಮಸ್ಯೆ, ಬದಲಾದ ಸರ್ಕಾರಗಳಿಂದಾಗಿ ಕೆರೆಗಳಲ್ಲಿ ತುಂಬಿರುವ ಹೂಳೆತ್ತುವ ಕೆಲಸ ಆರಂಭಗೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಕೆರೆಗಳನ್ನು ಗ್ರಾಪಂಗಳ ವ್ಯಾಪ್ತಿಗೆ ತಂದು ನರೇಗಾದಡಿ ಸಮಗ್ರ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ.

ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಂತರ್ಜಲಮಟ್ಟ ವೃದ್ಧಿಸಲು, ಕೆರೆಗಳ ಸಂರಕ್ಷಣೆ ಮಾಡಲು ಹಾಗೂ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನೂರಾರು ಕೆರೆಗಳನ್ನು ನರೇಗಾದಡಿ ಅಭಿವೃದ್ಧಿಪಡಿಸಿದೆ. ನರೇಗಾ ಯೋಜನೆಯಡಿ ಅವಕಾಶಗಳಿರುವುದರಿಂದ 100 ಎಕರೆಗಿಂತ ಕಡಿಮೆ ವಿಸ್ತೀರ್ಣದ ಕೆರೆಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆ, ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸರ್ಕಾರಿ ಕೆರೆಗಳ ಅಂದಾಜು ವಿವರ
ವಿಭಾಗ ಅಂಕಿ ಸಂಖ್ಯೆ
ದೊಡ್ಡ ಕೆರೆಗಳು (100 ಎಕರೆ ಮೇಲ್ಪಟ) 50
ಮಧ್ಯಮ ಕೆರೆ (50 ಎಕರೆ ಮೇಲ್ಪಟ್ಟ) 245
ಸಣ್ಣ ಕೆರೆ (25 ಎಕರೆ ಮೇಲ್ಪಟ್ಟ) 643
ಕೆರೆಗಳು (1ರಿಂದ 15 ಎಕರೆ) 930

ಈಗಾಗಲೇ ನರೇಗಾ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿ ಹಂತದಲ್ಲಿದೆ. 100 ಎಕರೆಗಿಂತ ಕಡಿಮೆ ವಿಸ್ತೀರ್ಣವುಳ್ಳ ಕೆರೆಗಳನ್ನು ಗ್ರಾಪಂಗಳಿಗೆ ಹಸ್ತಾಂತರಿಸುವ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು.| ರಾಹುಲ ಶಿಂಧೆ, ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net