

ಶಿರಸಿ: ಕೆಪಿಸಿಸಿಯ ನೂತನ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆ ಗೆಲುವಿಗಾಗಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ. ಜಿಲ್ಲೆಯ ಎಲ್ಲ ನಾಯಕರೂ ಪಾಲ್ಗೊಂಡಿದ್ದು, ಸಂಘಟನೆ ಬಲಪಡಿಸಿ ಗೆಲುವಿನ ತಂತ್ರ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿದ್ದು, ಬಿಜೆಪಿಯ ಅಲೆಯನ್ನು ತಡೆಯುವ ಶಕ್ತಿ ಕಾಂಗ್ರೆಸ್ಸಿಗಿದೆ. ಆದರೂ ಸಂಘಟನೆಯನ್ನು ನೂತನ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಇನ್ನಷ್ಟು ಬಲಪಡಿಸಲಾಗುವುದು ಎಂದರು.
ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಉತ್ತಮ ಆಡಳಿತ ನೀಡಿ ಜನರ ಮೆಚ್ಚುಗೆ ಗಳಿಸಿತ್ತು. ಆದರೆ ಈಗ ಎರಡೂ ಕಡೆ ಬಿಜೆಪಿ ಸರ್ಕಾರವಿದ್ದು, ಅವರು ಮಾತಿನಂತೆ ನಡೆಯುತ್ತಿದ್ದಾರೆಯೇ? ಎಂಬ ಪ್ರಶ್ನೆ ಎಲ್ಲರಲ್ಲಿ ಉದ್ಭವವಾಗಿದೆ. ಅಲ್ಲದೇ ಹಿಂದಿನ ಸರ್ಕಾರದ ಸಾಲಮನ್ನಾ ಯೋಜನೆಯ 50 ಕೋಟಿ ರೂ. ಜಿಲ್ಲೆಗೆ ಬರಬೇಕಾಗಿದ್ದು, ಇಲ್ಲಿಯ ರೈತರ ಕತೆಯೇನು? ರೈತನ ತೊಂದರೆಗಳಿಗೆ ಕೊನೆಯೆಂದು? ಎಂದು ಪ್ರಶ್ನಿಸಿದ ಅವರು, ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಮರಳು ನೀಡುವ ವ್ಯವಸ್ಥೆ ಆರಂಭವಾಗಿಲ್ಲ. ಇ- ಸ್ವತ್ತು ಸಮಸ್ಯೆ ಹಾಗೆಯೇ ಮುಂದುವರಿಯುತ್ತಿದೆ. ಇದರ ನಿವಾರಣೆಗೆ ಸರ್ಕಾರ ಕ್ರಮವಹಿಸಬೇಕು ಎಂದರು.
ಈ ವೇಳೆ ಪ್ರಮುಖರಾದ ಬಸವರಾಜ ದೊಡ್ಮನಿ, ಸಂತೋಷ ಶೆಟ್ಟಿ, ದೀಪಕ ದೊಡ್ಡೂರು, ಎಸ್.ಕೆ . ಭಾಗ್ವತ್, ಗೀತಾ ಶೆಟ್ಟಿ ಮುಂತಾದವರು ಇದ್ದರು.
ಪ್ರಾಮಾಣಿಕವಾಗಿ ಕೆಲಸ: ಜಿಲ್ಲಾಧ್ಯಕ್ಷರ ಬದಲಾವಣೆ ನೂತನ ರಾಜ್ಯಾಧ್ಯಕ್ಷರ ಹಾಗೂ ಜಿಲ್ಲೆಯ ಹಿರಿಯ ಮುಖಂಡರ ತೀರ್ವನವಾಗಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಹಿರಿಯರ ತೀರ್ವನಕ್ಕೆ ಬದ್ಧವಾಗಿದ್ದೇನೆ. ಈ ಸ್ಥಾನದಲ್ಲಿ ಇರುವಷ್ಟು ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭೀಮಣ್ಣ ನಾಯಕ ತಿಳಿಸಿದರು.