

ಕಲಬುರಗಿ: ತಂತ್ರಜ್ಞಾನ, ಗ್ರಂಥಾಲಯಗಳು ಜನರಿಗೆ ಸೇವೆ ಸಲ್ಲಿಸುವ ವಿಧಾನ ಪರಿವರ್ತಿಸಿವೆ ಎಂದು ಮುಂಬೈನ ಇಂದಿರಾಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಡೆವಲಪಮೆಂಟ್ ರಿಸರ್ಚ್ (ಐಜಿಐಡಿಆರ್) ಮುಖ್ಯ ಗ್ರಂಥಪಾಲಕ ಡಾ.ಎಸ್.ಎಂ.ಪೂಜಾರ್ ಹೇಳಿದರು.
ಕಡಗಂಚಿ ಬಳಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃತಕ ಬುದ್ದಿಮತ್ತೆ ಮತ್ತು ಸಂಶೋಧನೆ: ಪರಿಣಾಮ ಮತ್ತು ಅನ್ವಯಗಳು ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿ, ಗ್ರಂಥಾಲಯ ವಿಜ್ಞಾನದ ಐದು ನಿಯಮಗಳಾದ ವರ್ಗೀಕರಣ ಯೋಜನೆ, ಕ್ಯಾಟಲಾಗ್, ಶಿಕ್ಷಣ, ವಿಸ್ತರಣೆ, ತತ್ವಶಾಸ್ತçದ ದಾಖಲೀಕರಣಕ್ಕೆ ಡಾ.ಎಸ್.ಆರ್.ರಂಗನಾಥ್ ಕೊಡುಗೆ ಅಪಾರ ಎಂದರು.
ಕೃತಕ ಬುದ್ಧಿಮತ್ತೆ ಎಂಬುದು ಕಂಪ್ಯೂಟರ್ ವಿಜ್ಞಾನದಲ್ಲಿ ಜನಪ್ರಿಯವಾಗುತ್ತಿದೆ. ಇದು ಅನೇಕ ಕ್ಷೇತ್ರಗಳಲ್ಲಿ ಮಾನವ ಜೀವನ ಬದಲಿಸಿದೆ. ಕಳೆದ ಎರಡು ದಶಕಗಳಲ್ಲಿ ಕೃತಕ ಬುದ್ಧಿಮತ್ತೆಯು ಶಿಕ್ಷಣ, ಉತ್ಪಾದನೆ, ಸೇವಾ ವಲಯದ ಕಾರ್ಯಕ್ಷಮತೆ ಸುಧಾರಿಸಿದೆ. ಕೃತಕ ಬುದ್ಧಿಮತ್ತೆಯ ಅನ್ವಯಗಳು ಜೀವನದ ವಿವಿಧ ಕ್ಷೇತ್ರಗಳ ಮೇಲೆ ಭಾರಿ ಪರಿಣಾಮ ಬೀರುತ್ತವೆ ಎಂದರು.
ಸಿಯುಕೆಯ ಕೇಂದ್ರ ಗ್ರಂಥಾಲಯ ಆರಂಭಿಸಿರುವ ಗುಡ್ ಮಾರ್ನಿಂಗ್ ಸಿಯುಕೆ ನ್ಯೂಸ್ ಕ್ಲಿಪ್ಪಿಂಗ್ ಸೇವೆಯನ್ನು ಪ್ರಭಾರಿ ಕುಲಸಚಿವ ಪ್ರೊ.ಚನ್ನವೀರ್ ಆರ್.ಎಂ ಬಿಡುಗಡೆಗೊಳಿಸಿ ಮಾತನಾಡಿ, ಸಿಯುಕೆ ಗ್ರಂಥ ಪಾಲಕ ಮತ್ತು ತಂಡವು ಗುಡ್ ಮಾರ್ನಿಂಗ್ ಸಿಯುಕೆ ನ್ಯೂಸ್ ಕ್ಲಿಪ್ಪಿಂಗ್ ಸೇವೆಗಳ ಮೂಲಕ ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನ ಸುಧಾರಿಸಲು ಸುದ್ದಿ ಸೇವೆ ನೀಡುತ್ತಿದೆ. ಕೃತಕ ಬುದ್ಧಿಮತ್ತೆ ಜೀವನದ ಪ್ರತಿ ಕ್ಷೇತ್ರದಲ್ಲೂ ಪ್ರಮುಖ ಪಾತ್ರ ವಹಿಸಲಿದೆ. ಸಂಶೋಧನೆಗೆ ಎಐ ಉಪಕರಣವನ್ನು ಯಾವ ಪ್ರಮಾಣದಲ್ಲಿ ಬಳಸಬಹುದು ಎಂದು ಸಂಶೋಧಕರು ಯೋಚಿಸಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯದ ಗ್ರಂಥಪಾಲಕ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಪಿ.ಎಸ್.ಕಟ್ಟಿಮನಿ ಪ್ರಾಸ್ತಾವಿಕ ಮಾತನಾಡಿದರು.