ಗ್ಯಾಸ್ ಸಿಲಿಂಡರ್​ಗಳಿಗೆ ಬೆಂಕಿ

1KWR1A
Published on

ಕಾರವಾರ: ಸಿಲಿಂಡರ್​ಗಳು ತುಂಬಿದ್ದ ವಾಹನಕ್ಕೆ ಬೆಂಕಿ ತಗುಲಿದ ಘಟನೆ ಭಾನುವಾರ ಬೆಳಗಿನಜಾವ ನಗರದಲ್ಲಿ ನಡೆದಿದೆ.

ಕೋಡಿಬಾಗದ ಗಣೇಶ ಸರ್ವೀಸಸ್ ಎದುರು ನಿಲ್ಲಿಸಿದ್ದ ವಾಹನದಲ್ಲಿ ಗೋ ಗ್ಯಾಸ್ ಕಂಪನಿಗೆ ಸೇರಿದ 45ಕ್ಕೂ ಹೆಚ್ಚು ಅಡುಗೆ ಸಿಲಿಂಡರ್​ಗಳನ್ನು ಇಡಲಾಗಿತ್ತು. ಬೆಳಗಿನಜಾವ 3.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ವಾಹನದಲ್ಲಿ 9 ತುಂಬಿದ್ದ ಹಾಗೂ ಇನ್ನೂ 36 ರಷ್ಟು ಖಾಲಿ ಸಿಲಿಂಡರ್​ಗಳು ಇದ್ದವು. ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಥಳೀಯರು ಅಗ್ನಿಶಾಮಕಕ್ಕೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಐದಕ್ಕೂ ಹೆಚ್ಚು ಸಿಲಿಂಡರ್​ಗಳು ಸಂಪೂರ್ಣ ಸುಟ್ಟು ಹೋಗಿವೆ. ವಾಹನಕ್ಕೂ ಹಾನಿಯಾಗಿದೆ. ಆದರೆ, ಪೈಬರ್ ಸಿಲಿಂಡರ್​ಗಳಾಗಿದ್ದರಿಂದ ಸ್ಫೋಟ ಸಂಭವಿಸಿಲ್ಲ.

ಬೆಂಕಿ ಅವಘಡದಿಂದ ನಾಲ್ವರಿಗೆ ಗಾಯ

ಅಂಕೋಲಾ: ತಾಲೂಕಿನ ಅಗಸೂರು ಸಮೀಪದ ನವಗದ್ದೆಯಲ್ಲಿರುವ ಆಯುರ್ವೆದಿಕ್ ಔಷಧ ತಯಾರಿಕೆ ಘಟಕ ಪ್ರಕೃತಿ ಪ್ರಾಡಕ್ಟ್ಸ್ನಲ್ಲಿ ಬೆಂಕಿ ಅನಾಹುತ ಸಂಭವಿಸಿ ನಾಲ್ವರು ಕಾರ್ವಿುಕರು ತೀವ್ರವಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

ಬೊಬ್ರುವಾಡದ ರಾಘು ನಾಯ್ಕ (25), ಜಾರ್ಖಂಡ ಮೂಲದ ಸಂತೋಷ ಪೂಜಾರ(19), ರಾಜೇಂದ್ರ ಮಿರ್ಜಾ(37), ಲಖನ್ ತೂರಿ(21) ಗಾಯಗೊಂಡವರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಸಾಗಿಸಲಾಗಿದೆ.

ಕಾರ್ಖಾನೆಯ ಸ್ಟ್ರೇ ಡ್ರೈಯರ್ ಕೋಣೆಯಲ್ಲಿ ಕಾರ್ವಿುಕರು ಕಾರ್ಯನಿರ್ವಹಿಸುತ್ತಿರುವಾಗ ಬಾಯ್ಲರ್ ಸ್ಪೋಟಗೊಂಡು ಅವಘಡ ಸಂಭವಿಸಿದೆ ಎನ್ನಲಾಗಿದೆ. ಶಾಸಕಿ ರೂಪಾಲಿ ನಾಯ್ಕ ಹಾಗೂ ಕಾರ್ವಿುಕ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಕಾರ್ವಿುಕರ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವಂತೆ ಕಾರ್ಖಾನೆ ಮಾಲೀಕರಿಗೆ ಸೂಚಿಸಿದರು. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ವಶ

ಯಲ್ಲಾಪುರ: ತಾಲೂಕಿನ ವಿವಿಧೆಡೆ ಅಕ್ರಮ ಮದ್ಯ ಮಾರಾಟ ಹಾಗೂ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಪೊಲೀಸರು ಪಿಎಸ್​ಐ ಮಂಜುನಾಥ ಗೌಡರ್ ನೇತೃತ್ವದಲ್ಲಿ ದಾಳಿ ನಡೆಸಿ, 8280 ರೂ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಕೊಡ್ಲಗದ್ದೆ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅರಣ್ಯ ಪ್ರದೇಶದಲ್ಲಿ ವಿಜಯಕುಮಾರ ಮಣಪಾಟಿ ಎಂಬಾತ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ, 8038 ರೂ ಮೌಲ್ಯದ 100 ಸಾರಾಯಿ ಪ್ಯಾಕೆಟ್ ಹಾಗೂ 3 ಬಾಕ್ಸ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಉಮ್ಮಚಗಿಯ ಸಜಿ ಮೋಹನ್ ಕೃಷ್ಣ ನಾಯರ್ ಎಂಬುವರ ಅಂಗಡಿಯ ಶೆಡ್​ನಲ್ಲಿ ಕುಡಿಯಲು ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ 121 ರೂ. ಮೌಲ್ಯದ ವಿಸ್ಕಿ ಪೌಚ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಮಾವಿನಕಟ್ಟಾದಲ್ಲಿ ನಾಗೇಶ ರಾಮಾ ದೇವಾಡಿಗ ಎಂಬಾತನ ಮನೆಯ ಎದುರಿನ ಶೆಡ್​ನಲ್ಲಿ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದು, ಅಲ್ಲಿ 121 ರೂ ಮೌಲ್ಯದ ವಿಸ್ಕಿ ಪೌಚ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಳಿ ನದಿಯಲ್ಲಿ ಶವ ಪತ್ತೆ

ಜೊಯಿಡಾ: ತಾಲೂಕಿನ ಬಾಡಗುಂದ ಬಳಿ ಕಾಳಿನದಿಗೆ ಈಜಲು ಹೋಗಿ ಶನಿವಾರ ಸಂಜೆ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ. ಮೃತನನ್ನು ದಾಂಡೇಲಿಯ ಸುಭಾಸನಗರದ ರಿಯಾಜ್ ಅಬ್ದುಲ್ ಮಜೀದ್ ಜುಂಜವಾಡ್ಕರ್(21) ಎಂದು ಗುರುತಿಸಲಾಗಿದೆ. ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net