ಗ್ಯಾರಂಟಿಗಾಗಿ ಎಸ್ಸಿ,ಎಸ್ಟಿ ಅನುದಾನ ಬಳಕೆ

bkt-4-1
ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
Published on

ಬಾಗಲಕೋಟೆ: ಬಜೆಟ್‌ನಲ್ಲಿ ಎಸ್ಸಿ, ಎಸ್ಟಿ ಜನಾಂಗಕ್ಕಾಗಿ ಮೀಸಲಿಟ್ಟ ಅನುದಾನ ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ ಹಾಗೂ ಹಿಂದು ವಿದ್ಯಾರ್ಥಿನಿಯರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿ ಹೋಗಿದೆ. ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ. ಇಂತಹ ಕೆಟ್ಟ ಸರ್ಕಾರ ಕರ್ನಾಟಕ ಇತಿಹಾಸದಲ್ಲಿಯೇ ಎಂದು ನೋಡಿಲ್ಲ. ಉಡುಪಿಯಲ್ಲಿ ನಡೆದ ವಿದ್ಯಾರ್ಥಿಗಳ ಆಶ್ಲೀಲ ವಿಡಿಯೋ ಪ್ರಕರಣ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ರಾಜ್ಯದಲ್ಲಿ ನಡೆಯುತ್ತಿದ್ದು ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೀಡಿರುವ ೧೧ ಸಾವಿರ ಕೋಟಿ ರೂ. ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಣವನ್ನು ಗ್ಯಾರಂಟಿ ಯೋಜನೆಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರ್ಕಾರ ಜನ ತಕ್ಕ ಪಾಠ ಕಲಿಸಬೇಕು. ಅಭಿವೃದ್ಧಿ ಕಾರ್ಯಗಳಿಗೆ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲವೆಂದು ಅವರ ಶಾಸಕರೇ ಹೇಳುತ್ತಿದ್ದು, ಅವರಲ್ಲಿಯೇ ಅಸಮಾಧಾನ ಉಂಟಾಗಿದೆ. ರಾಜ್ಯದಲ್ಲಿ ವಸ್ತುಗಳ ಬೆಲೆ ಏರಿಕೆಯಾಗಿದ್ದರಿಂದ ಜನರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಆರೋಪಿಸಿದರು.

ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ವಿಧಾನ ಪರಿಷತ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಉಪಾಧ್ಯಕ್ಷ ಅಶೋಕ ಲಿಂಬಾವಳಿ, ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬೆಳಗಾವಿ ಪ್ರಭಾರಿ ಬಸವರಾಜ ಯಂಕಂಚಿ, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ಗ್ರಾಮೀಣ ಮಂಡಳ ಅಧ್ಯಕ್ಷ ಸುರೇಶ ಕೊಣ್ಣೂರ, ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಜಯಲಕ್ಷ್ಮಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸವಿತಾ ಹೊಸೂರ, ಪ್ರಧಾನ ಕಾರ್ಯದರ್ಶಿ ಉಮಾ ಚಟರಕಿ, ಕಾವೇರಿ ರಾಠೋಡ, ಭಾಗೀರಥಿ ಪಾಟೀಲ, ಸುಜಾತ ಶಿಂಧೆ, ರಾಜೇಂದ್ರ ಬಳೂಲಮಠ, ಶಿವಾನಂದ ಟವಳಿ, ಬಸವರಾಜ ಅವರಾದಿ, ಉಮೇಶ ಹಂಚಿನಾಳ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net