ಗ್ಯಾರಂಟಿ ಯೋಜನೆಗಳ ಮಾಹಿತಿ ಪ್ರದರ್ಶನಕ್ಕೆ ಚಾಲನೆ

bkt-12-4
Published on

ಬಾಗಲಕೋಟೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನವನಗರದ ಬಸ್ ನಿಲ್ದಾಣದಲ್ಲಿ ಏರ್ಪಡಿಸಿರುವ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನಕ್ಕೆ ಶಾಸಕರು ಆಗಿರುವ ಬಿಟಿಡಿಎ ಅಧ್ಯಕ್ಷ ಹೆಚ್.ವಾಯ್.ಮೇಟಿ ಮಂಗಳವಾರ ಚಾಲನೆ ನೀಡಿದರು.

ಮಾರ್ಚ 12 ರಿಂದ 14 ರವರೆಗೆ ಪ್ರದರ್ಶನಗೊಳ್ಳುವ ವಸ್ತು ಪ್ರದರ್ಶನ ಮಳಿಗೆಗೆ ಚಾಲನೆ ನೀಡಿ ನಂತರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಫಲಕಗಳನ್ನು ವೀಕ್ಷಿಸಿದರು. ಮಾಹಿತಿ ಪ್ರದರ್ಶನದಲ್ಲಿ ಕೃಷಿಯನ್ನು ಉತ್ತೇಜಿಸುವ ಕರ್ನಾಟಕ ರೈತ ಸಮೃದ್ದಿ ಯೋಜನೆ, ಸರಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಜಮೀನುಗಳಿಗೆ ಅನಧಿಕೃತ ಪರಭಾರೆಯಿಂದ ರಕ್ಷಣೆ ನೀಡುವ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ, ಮುಖ್ಯಮಂತ್ರಿಗಳ ಐತಿಹಾಸಿಕ ಜನಸ್ಪಂದನ ಕಾರ್ಯಕ್ರಮ, ಹಸಿವು ಮುಕ್ತ ಕರ್ನಾಟಕ, ಸಬಲೀಕರಣದತ್ತ ಮಹಿಳೆಯರ ಪಯಣ.

ಮನೆ ಮನ ಬೆಳೆಗಿದ ಭಾಗ್ಯದ ಬೆಳಕು, ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟಹೆಜ್ಜೆ, ಯುವಕರ ಶ್ರೇಯೋಭಿವೃದ್ದಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರದ ಜನಸ್ಪಂದನ ಕಾರ್ಯಕ್ರಮ, ಕ್ಷೀರಭಾಗ್ಯಕ್ಕೆ ಹತ್ತರ ಸಂಭ್ರಮ, ಆಯವ್ಯಯ ಮಂಡನೆಯಲ್ಲಿ ಚರಿತ್ರಾರ್ಹ ದಾಖಲೆ ನಿರ್ಮಿಸಿದ ಮುಖ್ಯಮಂತ್ರಿಗಳ ಸೇರಿದಂತೆ ಅನೇಕ ಜನಪರ ಯೋಜನೆಗಳ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ಬಾಗಲಕೋಟೆ ಘಟಕ ವ್ಯವಸ್ಥಾಪಕ ಅಶೋಕ ಕೋರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net