ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

19blrp2
Published on

ಬೇಲೂರು: ಮುಂಬರುವ ಗೌರಿ ಗಣೇಶ ಹಬ್ಬದ ಸಂದರ್ಭ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೇಲೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರೇವಣ್ಣ ಹೇಳಿದರು.

ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಆಯೋಜಕರಿಗಾಗಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಠಾಣಾ ವ್ಯಾಪ್ತಿಯಲ್ಲಿ 70 ರಿಂದ 80 ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಪ್ರತಿಯೊಬ್ಬರೂ ಪೊಲೀಸ್ ಸೇರಿದಂತೆ ಪುರಸಭೆ, ಸೆಸ್ಕ್, ಅಗ್ನಿಶಾಮಕ ದಳ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮೊದಲು ಅಧಿಕೃತವಾಗಿ ಅನುಮತಿ ಪಡೆಯಬೇಕು. ಪ್ರತಿಷ್ಠಾಪನೆ ನಂತರ ಯಾವುದೇ ಅಹಿತಕರ ಘಟನೆಗೂ ಅವಕಾಶವಿಲ್ಲದಂತೆ ಎಚ್ಚರ ವಹಿಸಬೇಕು. ನಮ್ಮ ವ್ಯಾಪ್ತಿಯಲ್ಲಿ ಅಂತಹ ಘಟನೆಗಳು ನಡೆದಿಲ್ಲ. ಮುಂದೆಯೂ ನಡೆಯದಂತೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಗಣಪತಿ ಕೂರಿಸುವ ಸ್ಥಳ ಸರ್ಕಾರಿ ಅಥವಾ ಖಾಸಗಿಯವರದ್ದಾಗಿದ್ದರೆ ಅವರಿಂದಲೂ ಅನುಮತಿ ಪಡೆಯಬೇಕು. ನಂತರ ನಾವು ಸ್ಥಳ ಪರಿಶೀಲಿಸಿ ಅನುಮತಿ ನೀಡಲಿದ್ದೇವೆ. ಸಾರ್ವಜನಿಕರಿಂದ ಬಲವಂತ ಚಂದಾ ವಸೂಲಿ ಮಾಡಬಾರದು. ಅನ್ಯ ಧರ್ಮೀಯರ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ನಡೆಸಬೇಕು. ಪ್ರತಿಯೊಬ್ಬರೂ ಇಲಾಖೆಯ 25 ಅಂಶಗಳನ್ನು ಪಾಲಿಸಬೇಕು. ಅನುಮತಿ ಇಲ್ಲದೆ ಪ್ರತಿಷ್ಠಾಪಿಸಿದ ಅಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸ್ಥಳದಲ್ಲಿ ಸಿಸಿ ಟಿವಿ ಅಳವಡಿಸಬೇಕು. ಫ್ಲೆಕ್ಸ್‌ಗಳನ್ನು ಹಾಕಬಾರದು. ಗಣೇಶ ಮೂರ್ತಿ ವಿಸರ್ಜಿಸುವ ಮುನ್ನ ಮಾಹಿತಿ ನೀಡಿದರೆ ಪೊಲೀಸರನ್ನು ನೇಮಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ಸಂದರ್ಭ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಂಜೆ 7 ರಿಂದ ರಾತ್ರಿ 10.30ರವರೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ಪಿಎಸ್‌ಐ ಶಿವನಗೌಡ.ಜಿ.ಪಾಟೀಲ್ ಮಾತನಾಡಿ, ಗಣಪತಿ ಪ್ರತಿಷ್ಠಾನೆ ಜಾಗದಲ್ಲಿ ಫ್ಲೆಕ್ಸ್ ಅಳವಡಿಕೆ ನಿಷೇಧ. ಆಯೋಚಕರು ಗಣೇಶ ಮೂರ್ತಿ ವಿಸರ್ಜಿಸುವ ದಿನವನ್ನು ಮೊದಲೇ ತಿಳಿಸಬೇಕು. 100 ರೂ.ಪ್ರಮಾಣಪತ್ರ ಕೊಡಬೇಕು. ಜನಸಂದಣಿ ಸೇರುವಲ್ಲಿ ಕಡ್ಡಾಯ ಸಿಸಿ ಟಿವಿ ಅಳವಡಿಸಬೇಕು. ಗಣಪತಿ ಪೆಂಡಾಲಿನಲ್ಲಿ ನೀರು, ಮರಳು ಸೇರಿದಂತೆ ಅಗ್ನಿ ಅವಘಡ ನಡೆಯದಂತೆ ಎಚ್ಚರ ವಹಿಸಬೇಕು. ವಿಸರ್ಜನೆ ಸಂದರ್ಭದಲ್ಲಿ ಅನ್ಯ ಕೋಮಿನ ವಿರುದ್ಧ ಘೋಷಣೆ ಕೂಗಬಾರದು ಎಂದರು. ಎಎಸ್‌ಐ ಶೇಖರಪ್ಪ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net