ಗೌರವಯುತ ಬದುಕಿಗೆ ಶಿಕ್ಷಣ ಬಹಳ ಮುಖ್ಯ

1blrp6
Published on

ಬೇಲೂರು: ಸಮಾಜದಲ್ಲಿ ಗೌರವಯುತವಾಗಿ ಬದುಕಲು ಶಿಕ್ಷಣ ಬಹಳ ಮುಖ್ಯವಾಗಿದ್ದು, ನಮ್ಮ ಗುರಿ ಶಿಕ್ಷಣದತ್ತಲೇ ಇರಬೇಕೇ ಹೊರತು ಬೇರೆ ಕಡೆ ತಿರುಗಬಾರದು ಎಂದು ಅರೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕಡೇಗರ್ಜೆ ವಿಜಯರಾಜು ಸಲಹೆ ನೀಡಿದರು.

ತಾಲೂಕಿನ ಅರೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನನ್ನಿಬ್ಬರ ಮಕ್ಕಳ ಪ್ರಾಥಮಿಕ ಶಿಕ್ಷಣದ ಅವಧಿಯಲ್ಲಿ ಒಂದು ನೋಟ್ ಬುಕ್ ಖರೀದಿಗೆ ನಾನು ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ಅಂತಹ ಕಷ್ಟದ ಪರಿಸ್ಥಿತಿಯಲ್ಲಿ ಇಬ್ಬರು ಮಕ್ಕಳು ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಿ ಉದ್ಯೋಗ ಪಡೆದು ಅವರವರ ಜೀವನವನ್ನು ರೂಪಿಸಿಕೊಂಡು ನಮಗೆ ಆಸರೆಯಾಗಿರುವುದು ನೆಮ್ಮದಿ ತಂದಿದೆ. ಅಂತಹ ಕಷ್ಟಕರ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗಾದರೂ ಹೋಗಲಾಡಿಸುವ ಉದ್ದೇಶದಿಂದ ನಾನಿಂದು ನಿಮ್ಮೆಲ್ಲರ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸುತ್ತಿದ್ದೇನೆ ಎಂದರು.

ಎಲ್ಲ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ನಿಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಸತತ ಪ್ರಯತ್ನ ಮಾಡಬೇಕು. ಮನೆಯಲ್ಲಿ ನಿಮ್ಮ ಉಜ್ವಲ ಭವಿಷ್ಯದ ಶಿಕ್ಷಣಕ್ಕಾಗಿ ಪಾಲಕರು ಪಡುತ್ತಿರುವ ಕಷ್ಟವನ್ನು ಮನವರಿಕೆ ಮಾಡಿಕೊಂಡು ನಿಮ್ಮ ಅವರ ಅಭಿಲಾಷೆಯನ್ನು ಪೂರ್ಣಗೊಳಿಸಿ ಅವರಿಗೂ ಸಮಾಜದಲ್ಲಿ ಗೌರವ ಹೆಚ್ಚಿಸಬೇಕು ಎಂದರು.

ರಾಜ್ಯಶಾಸ್ತ್ರ ಉಪನ್ಯಾಸಕ ಎಚ್.ಎಸ್.ಮಂಜುನಾಥ್ ಮಾತನಾಡಿ, ಕಾಲೇಜಿಗೆ ಹೊಸದಾಗಿ ಪ್ರವೇಶ ಪಡೆದು ದಾಖಲಾಗಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಉಪನ್ಯಾಸಕ ವೃಂದ, ಅಭಿವೃದ್ಧಿ ಸಮಿತಿ ಹಾಗೂ ಕಾಲೇಜಿನ ವ್ಯವಸ್ಥೆ ಬಗ್ಗೆ ಇರುವ ಹಲವಾರು ಗೊಂದಲಗಳನ್ನು ನಿವಾರಿಸಿ, ವಿದ್ಯಾರ್ಥಿಗಳೆಲ್ಲರು ಒಬ್ಬರಿಗೊಬ್ಬರು ಪರಸ್ಪರ ಪರಿಚಿತರಾಗಲು ಇದೊಂದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳಲ್ಲಿರುವ ವೇದಿಕೆಯ ಭಯ, ಆತಂಕ, ನಾಚಿಕೆಯನ್ನು ಹೋಗಲಾಡಿಸಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪ್ರಾಂಶುಪಾಲ ಪರಮಶಿವಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಖಜಾಂಚಿ ಸೋಮನಾಥ್, ಎಸ್‌ಡಿಎಂಸಿ ಅಧ್ಯಕ್ಷ ಯುವರಾಜ್, ಉಪನ್ಯಾಸಕರಾದ ಸುಂದರೇಶ್, ಶಿವಕುಮಾರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net