

ಚಿಕ್ಕಮಗಳೂರು: ಸಮರ್ಪಕವಾಗಿ ಸಾರಿಗೆ ವ್ಯವಸ್ಥೆಯಿಲ್ಲದ ತಾಲೂಕಿನ ಗೌಡನಹಳ್ಳಿಗೆ ಸೋಮವಾರ ಸಾರಿಗೆ ಸಂಸ್ಥೆಯಿಂದ ಬಸ್ ವ್ಯವಸ್ಥೆ ಕಲ್ಪಿಸಿದ್ದು ಗ್ರಾಮಸ್ಥರು ಸ್ವಾಗತಿಸಿದರು.
ಗೌಡನಹಳ್ಳಿಗೆ ಹಲವು ವರ್ಷಗಳಿಂದ ಬಸ್ ಸೌಲಭ್ಯ ಇರಲಿಲ್ಲ. ಆಸ್ಪತ್ರೆ, ಶಾಲೆ, ಕಾಲೇಜು ಹಾಗೂ ಸಾರ್ವಜನಿಕರ ಕೆಲಸಕ್ಕಾಗಿ ಸ್ವಂತ ಬೈಕ್, ಕಾರುಗಳು ಇದ್ದವರು ಹೋಗಿ ಬರುತ್ತಿದ್ದರು. ವಾಹನ ಸೌಕರ್ಯ ಇಲ್ಲದವರಿಗೆ ತೀವ್ರ ತೊಂದರೆಯಾಗಿತ್ತು. ಹಾಗಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಅಧಿಕಾರಿ ಸೋಮವಾರ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸಿದ್ದಾರೆ. ಗ್ರಾಮಕ್ಕೆ ಬಂದ ಬಸ್ ಅನ್ನು ಮುಖಂಡರು, ವಿದ್ಯಾರ್ಥಿಗಳು ಅಲಂಕರಿಸಿ ಪೂಜೆ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಮೋಹನ್ ಮಾತನಾಡಿ, ಬಸ್ ವ್ಯವಸ್ಥೆಯಿಲ್ಲದೆ ಗ್ರಾಮಸ್ಥರು ಆಟೋ ಅಥವಾ ಸ್ವಂತ ವಾಹನ ಅವಲಂಬಿಸಿದ್ದರು. ಇದೀಗ ಅಧಿಕಾರಿಗಳು ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿರುವುದು ಸಂತಸ ತಂದಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷೆ ದಮಯಂತಿ ಮಾತನಾಡಿ, ಬೆಳಗ್ಗೆ ಮತ್ತು ಸಂಜೆ ಬಸ್ ಸಂಚರಿಸಲಿದ್ದು, ಮುಂದಿನ ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಮಧ್ಯಾಹ್ನವೂ ಒಮ್ಮೆ ಓಡಾಡುವಂತೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಚಾಲಕ ದಿವಾಕರ್, ನಿರ್ವಾಹಕ ಛಾಯಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ, ಸಂಗೊಳ್ಳಿ ರಾಯಣ್ಣ ಸಂಘದ ಅಧ್ಯಕ್ಷ ಗಂಗಾಧರ್, ಕಾಂಗ್ರೆಸ್ ಅಂಬಳೆ ಹೋಬಳಿ ಒಬಿಸಿ ಘಟಕದ ಅಧ್ಯಕ್ಷ ಚಿಕ್ಕೇಗೌಡ, ಗ್ರಾಮಸ್ಥರಾದ ಲೋಕೇಶ ಗೌಡ, ರಘು, ಹರೀಶ್, ಪುಟ್ಟಸ್ವಾಮಿ ಗೌಡ, ಶೀಲಾ, ಶಶಿಕಲಾ, ನಿಂಗಮ್ಮ, ನಾಗಮ್ಮ ಇತರರಿದ್ದರು.