

ವಿಜಯವಾಣಿ ಸುದ್ದಿಜಾಲ ಕಾರವಾರ
ಗೋವಾದಲ್ಲಿನ್ನು ಮಾದಕ ದ್ರವ್ಯ ಸೇವಿಸಿ ಪೊಲೀಸರೆದುರು ಓಡಾಡಿಕೊಂಡಿರೋದು ಕಷ್ಟ. ಮಾದಕ ದ್ರವ್ಯ ಸೇವಿಸಿದ ಬಗ್ಗೆ ಸ್ಥಳದಲ್ಲೇ ಪರೀಕ್ಷೆ ಮಾಡಿ ಅವರನ್ನು ಬಂಧಿಸುವ ಕಾರ್ಯವನ್ನು ಗೋವಾ ಪೊಲೀಸರು ಪ್ರಾರಂಭಿಸಿದ್ದಾರೆ.
ಮದ್ಯ ಕುಡಿದು, ಗಾಂಜಾ ಹೊಡೆದು ಮೋಜು ಮಾಡಲೆಂದೇ ದೇಶದ ವಿವಿಧ ಭಾಗಗಳಿಂದ ಜನ ಗೋವಾಕ್ಕೆ ಬರುತ್ತಾರೆ. ಹೊರ ದೇಶಗಳಿಂದ ಬರುವ ಹಲವರು ಗೋವಾದಲ್ಲಿ ಮಾದಕ ದ್ರವ್ಯ ಬಳಕೆ ಮಾಡುತ್ತಾರೆ. ಗೋವಾದಲ್ಲಿ ಮದ್ಯ ಮುಕ್ತವಾದರೂ ಗಾಂಜಾ, ಅಫೀಮು, ಚರಸ್‌ನಂಥ ಮಾದಕ ದ್ರವ್ಯಗಳ ಸೇವನೆ ಕಾನೂನು ಬಾಹಿರವಾಗಿದೆ. ಆದರೆ, ಎಗ್ಗಿಲ್ಲದೇ ದಂಧೆ ನಡೆಯುತ್ತಿದೆ. ಇದನ್ನು ತಡೆಯಲು ಗೋವಾ ಸರ್ಕಾರವೀಗ ಕಠಿಣ ಕ್ರಮ ವಹಿಸಿದೆ.
ಮಾದಕ ದ್ರವ್ಯ ಸೇವಿಸಿದ ಬಗ್ಗೆ ಸ್ಥಳದಲ್ಲೇ ಪರೀಕ್ಷೆ ಮಾಡಿ ಅವರನ್ನು ಬಂಧಿಸುವ ಕಾರ್ಯವನ್ನು ಗೋವಾ ಪೊಲೀಸರು ಪ್ರಾರಂಭಿಸಿದ್ದಾರೆ. ಊದಿ ಸಾರಾಯಿ ಕುಡಿದವರನ್ನು ಪತ್ತೆಹಚ್ಚುವ ತಂತ್ರಜ್ಞಾನ ಎಲ್ಲೆಡೆ ಇದೆ. ಈಗ ಇತರ ೬ ಮಾದಕ ದ್ರವ್ಯಗಳನ್ನೂ ಪತ್ತೆ ಹಚ್ಚುವ ಯಂತ್ರ ಬಂದಿದೆ. ಈಗಾಗಲೇ ಕೇರಳ ಹಾಗೂ ಗುಜರಾತ್ ರಾಜ್ಯದಲ್ಲಿ ಬಳಕೆಯಲ್ಲಿರುವ ಸೊಟಾಕ್ಸೊ ಎಂಬ ಯಂತ್ರವನ್ನು ಗೋವಾದಲ್ಲೂ ಪರಿಚಯಿಸಲಾಗಿದೆ. ಈ ಯಂತ್ರದಿಂದ ವ್ಯಕ್ತಿಯ ಬಾಯಿಯ ಉಗುಳನ್ನು ಪರೀಕ್ಷಿಸಿ ಐದೇ ನಿಮಿಷದಲ್ಲಿ ಆತ ಮಾದಕ ದ್ರವ್ಯ ಸೇವಿಸಿದ್ದಾನೆಯೇ ..? ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದು. ಸುಮಾರು ಮೂರು ಸಾವಿರದಷ್ಟು ಮಾದರಿಗಳ ಪರೀಕ್ಷಾ ಡೇಟಾವನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಈ ಹಿಂದೆ ವ್ಯಕ್ತಿಯ ರಕ್ತದ ಮಾದರಿಯನ್ನು ಪಡೆದು ಪ್ರಯೋಗಾಲಯಕ್ಕೆ ಕಳಿಸಬೇಕಿತ್ತು. ವರದಿ ಬರಲು ಒಂದು ದಿನ ತಡವಾಗುತ್ತಿತ್ತು. ಇದರಿಂದ ಮಾದಕ ವಸ್ತು ಕೈಯ್ಯಲ್ಲಿ ಸಿಕ್ಕಲ್ಲಿ ಮಾತ್ರ ಅವರ ಮೇಲೆ ಕಾನೂನು ಕ್ರಮ ವಹಿಸಲು ಸಾಧ್ಯವಾಗುತ್ತಿತ್ತು. ಮಾದಕ ದ್ರವ್ಯ ಸೇವಿಸಿದ್ದಾನೆ ಎಂದು ಪೊಲೀಸರಿಗೆ ಗೊತ್ತಾದರೂ ಅದನ್ನು ಸಾಬೀತು ಮಾಡಲು ಸಾಕಷ್ಟು ಕಷ್ಟ ಪಡಬೇಕಿತ್ತು. ಇದರಿಂದ ಅವರ ಸಹವಾಸಕ್ಕೇ ಪೊಲೀಸರು ಹೋಗುತ್ತಿರಲಿಲ್ಲ.
ಶನಿವಾರ ಉತ್ತರ ಗೋವಾದ ವಾಗ್ಟೋರ್ ಬೀಚ್ ಅಲ್ಲಿನ ಎಂಟಿ ನಾರ್ಕೊಟಿಕ್ ಸೇಲ್ ಹಾಗೂ ಸ್ಥಳೀಯ ಪೊಲೀಸರ ಸಹಕಾರದಲ್ಲಿ ಸೊಟಾಕ್ಸೊ ಯಂತ್ರದ ಮೂಲಕ ಪ್ರವಾಸಿಗರನ್ನು ಪರಿಶೀಲನೆ ನಡೆಸಿದ್ದು, ಮೊದಲ ದಿನವೇ ಬೋಣಗಿಯಾಗಿದೆ. ಏಳು ಜನರು ಮಾದಕ ದ್ರವ್ಯ ಸೇರಿಸಿರುವುದನ್ನು ಎಟಿಎಂ ಕಾರ್ಡ್ ಸ್ವೈಪ್ ಮಷಿನ್‌ನಂಥ ಸಣ್ಣ ಯಂತ್ರ ಕಂಡುಬಂದಿದೆ. ಗುಜರಾತ್, ಕೇರಳ, ಕರ್ನಾಟಕದ ಒಟ್ಟು ಏಳು ಪ್ರವಾಸಿಗರನ್ನು ಈ ಆರೋಪದ ಮೇಲೆ ಶನಿವಾರ ಬಂಧಿಸಲಾಗಿದೆ. ಅದರಲ್ಲಿ ಕಾರವಾರ ಮೂಲದ ಸಂದೇಶ ಎಸ್.ನಾಯ್ಕ (28) ಎಂಬಾತನನ್ನು ಬಂಧಿಸಲಾಗಿದೆ.