ಗೋ ಮಾತೆ ರಾಷ್ಟ್ರೀಯ ಪ್ರಾಣಿ ಅಂತ ಘೋಷಿಸಿ

bkt-3-1
ಬಾಗಲಕೋಟೆ ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಗೌರಿಶಂಕರ ಕಲ್ಯಾಣಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗೋ ಸಂಗಮ ಕಾರ್ಯಕ್ರಮದಲ್ಲಿ ತಮಿಳುನಾಡಿನ ಕಾಂಚಿಪುರಂನ ಪಂಚಗವ್ಯ ವಿದ್ಯಾಪೀಠ ಮತ್ತು ಗುರುಕುಲಮ್ ಸಂಸ್ಥಾಪಕ ಡಾ.ನಿರಂಜನ್ ವರ್ಮ ಜ್ಯೋತಿ ಬೆಳಗಿಸಿದರು.
Published on

ಬಾಗಲಕೋಟೆ: ಭೂ ಮಾತೆ ಮತ್ತು ಗೋ ಮಾತೆ ಬೇರೆಯಲ್ಲ. ಅವೆರಡು ಒಂದೇಯಾಗಿದೆ. ಭಾರತದಲ್ಲಿ ಗೋ ಸಂತತಿಗೆ ಇರುವ ಪ್ರಾಮುಖ್ಯತೆ ಬೇರೆ ದೇಶದಲ್ಲಿ ಇಲ್ಲ. ಗೋವು ರಾಷ್ಟ್ರ ಪ್ರಾಣಿಯಾಗಿ ಗುರುತಿ ಘೋಷಣೆ ಮಾಡುವ ಕೆಲಸ ಆಗಬೇಕು ಎಂದು ಗುಳೇದಗುಡ್ಡದ ಒಪ್ಪತೇಶ್ವರ ಸಂಸ್ಥಾನ ಮಠದ ಒಪ್ಪತೇಶ್ವರ ಸ್ವಾಮೀಜಿ ಹೇಳಿದರು.

ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಗೌರಿಶಂಕರ ಕಲ್ಯಾಣಮಂಟಪದಲ್ಲಿ ಬಾಗಲಕೋಟೆಯ ಪಾಂಜರಪೋಳ ಸಂಸ್ಥೆ ಗೋ ಶಾಲೆ, ಗೋಮಾತಾ ಫೌಂಡೇಶನ್ ಗೋ ಸೇವಾ ಗತಿ ವಿಧಿ ಕರ್ನಾಟಕ ಉತ್ತರ ಪ್ರಾಂತ, ಗೋಮಾತಾ ಸಹಕಾರ ಸಂಘ, ಪಂಚಗವ್ಯ ಡಾಕ್ಟರ್ ಅಸೋಸಿಯೇಷನ್ ಹಾಗೂ ಜಿಲ್ಲೆಯ ವಿವಿಧ ಗೋಶಾಲೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗೋ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಗಿನ ಕಾಲದಲ್ಲಿ ಮನೆ, ಕಟ್ಟಡ, ಕಚೇರಿಗಳು ಅಥವಾ ಯಾವುದೇ ಹೊಸ ಕಾರ್ಯಗಳನ್ನು ಗೋಮಾತೆ ಪ್ರವೇಶಿಸುವ ಮೂಲಕವೇ ಉದ್ಘಾಟಿಸುತ್ತಿದ್ದರು. ಇದರಿಂದ ಸುತ್ತ ಮುತ್ತಲಿನ ದುಷ್ಟ ಶಕ್ತಿ ದೂರವಾಗುತ್ತಿದ್ದವು. ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಗೋವಿನ ಸಗಣಿಯಿಂದ ಮನೆಗಳನ್ನು ಸಾರಿಸುತ್ತಿದ್ದರು. ಅದು ನಮ್ಮ ಪಾದಕ್ಕೆ ಸ್ಪರ್ಷವಾಗುವುದರಿಂದ ನಮ್ಮ ದೇಹದಲ್ಲಿನ ಉಷ್ಣಾಂಶ ಕಡಿಮೆ ಮಾಡಿಸುವ ಕೆಲಸವಾಗುತ್ತಿತ್ತು. ಆದರೆ, ಇಂದು ಮನೆಗಳಲ್ಲಿ ಟೈಲ್ಸ್ ಹಾಕಿ ಕಾಲು ಮುರಿದುಕೊಳ್ಳುತ್ತಿದ್ದೇವೆ. ಅಂತಹ ಸ್ಥಿತಿಗೆ ತಲುಪಿದ್ದೇವೆ. ಹಿಂದಿನ ಕಾಲದಲ್ಲಿ ಮಗಳ ಮದುವೇ ಮಾಡಿ ಕೊಟ್ಟರೆ ಕನ್ಯಾಧಾನದ ಜೊತೆಗೆ ಗೋಧಾನ ಮಾಡುತ್ತಿದ್ದರು ಏಕೆಂದರೆ, ಮಗಳು-ಅಳಿಯ ಆಕಳು ಹಾಲು ಕುಡಿದು ಆರೋಗ್ಯವಂತರಾಗಿರಲಿ ಎನ್ನುವ ಉದ್ದೇಶವಿತ್ತು. ಗೋ ಮಾತೆಯಲ್ಲಿ ೩೩ ದೇವಾನು ದೇವತೆಗಳು ನೆಲಸಿವೆ. ಅಂತಹ ಗೋ ಮಾತೆಯನ್ನು ಭಕ್ತಿಯಿಂದ ಕಾಣುವ ಕೆಲಸವಾಗಬೇಕಿದೆ ಎಂದರು.

ಜನರು ತಮ್ಮ ಹುಟ್ಟುಹಬ್ಬವನ್ನು ಆಡಂಭರವಾಗಿ ಆಚರಿಸಿಕೊಳ್ಳುವ ಬದಲು ಗೋಶಾಲೆಗಳಿಗೆ ತೆರಳಿ ಹಸುಗಳಿಗೆ ಮೇವು ಧಾನ ಮಾಡುವಂತಾಗಬೇಕು. ಇಂದಿನ ದಿನಮಾನದಲ್ಲಿ ಪಾಕಿಟು ಹಾಲು ಎಲ್ಲೆಂದರಲ್ಲಿ ಸಿಗುತ್ತದೆ. ಆದರೆ, ಆಕಳು ಹಾಲು ಸಿಗುವುದು ಕಷ್ಟವಾಗಿದೆ. ಪ್ರತಿಯೊಬ್ಬರೂ ಆಕಳು ಸಾಕುವ ಕೆಲಸವಾಗಲಿ ಎಂದು ತಿಳಿಸಿದರು.

ಪಂಚಗವ್ಯ ಚಿಕಿತ್ಸೆಯ ಪಾರಂಪರಿಕ ವೈದ್ಯ ಹನುಮಂತ ಮಳಲಿ ಮಾತನಾಡಿ, ಗೋ ಸೇವೆ ಮಾಡುವುದು ತಾಯಿ ಸೇವೆ ಮಾಡುವುದಕ್ಕಿಂತ ಹೆಚ್ಚು ಶ್ರೇಷ್ಠವಾದ ಕೆಲಸ. ಗೋವಿನ ರೋಮ ರೋಮಗಳಲ್ಲಿ ಋಷಿಮುನಿಗಳಿದ್ದಾರೆ. ಗೋವಿನ ಮೂತ್ರ ನೀರಿನಲ್ಲಿ ಸೇರಿಸಿ ಕುಡಿಯುವುದಕ್ಕಿಂತ ಶುದ್ಧ ನೀರು ಎಲ್ಲಿಯೂ ಸಿಗಲ್ಲ. ಹಾಗಾಗಿ ಗೋವಿನ ಮೂತ್ರ ಮತ್ತು ಶಗಣಿಯಿಂದ ತಯಾರಿಸಲ್ಪಟ್ಟ ಉತ್ಪಾದನೆಗಳನ್ನು ಬಳಸುವ ಕೆಲಸವಾಗಬೇಕು ಎಂದರು.

ಪ್ರೊ.ಎಸ್.ಎನ್. ಕುರಬರ ದಿಕ್ಸೂಚಿ ಭಾಷಣ ಮಾಡಿದರು. ಮಾಜಿ ಶಾಸಕ ವೀರಣ್ಣ ಚರಂತಿಮಠ, ಯಲಬುರ್ಗಿಯ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೀಳಗಿಯ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಟೇಕಿನಮಠದ ಮಲ್ಲಿಕಾರ್ಜುನ ದೇವರು, ಗೋಮಾತಾ ಸಹಕಾರ ಸಂಘದ ಅಧ್ಯಕ್ಷ ಡಾ.ಜೀವನ್ ಕುಮಾರ.ವಿ, ಗೋಸೇವಾ ಗತಿ ವಿಽ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ರಾಮಕೃಷ್ಣ ಬುದ್ನಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net