

ಗೋಕರ್ಣ: ನಾಗರಪಂಚಮಿ ನಿಮಿತ್ತ ಅಸಂಖ್ಯಾತ ಭಕ್ತರು ಪುರಾಣ ಪ್ರಸಿದ್ಧ ನಾಗೇಶ್ವರ ಲಿಂಗಕ್ಕೆ ಮಂದಿರದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಮಂಗಳವಾರ ವಿಶೇಷ ಪೂಜಾಭಿಷೇಕ ಕೈಗೊಂಡರು. ಮಂದಿರ ಸುತ್ತ ಪ್ರತಿಷ್ಠಾಪಿಸಿರುವ ನೂರಾರು ನಾಗಪ್ರತಿಮೆಗಳಿಗೆ ಮತ್ತು ಪ್ರವೇಶ ದ್ವಾರದ ಪುರಾತನ ಅಶ್ವತ್ಥ ವೃಕ್ಷಕ್ಕೆ ಹಾಲೆರೆದರು. ಎರಡು ವರ್ಷದ ನಂತರ ವಾರ್ಷಿಕ ಪೂಜೆಗೆ ಅವಕಾಶ ನೀಡಿರುವ ಕಾರಣ ಬೆಳಗ್ಗೆ 5 ರಿಂದಲೆ ಭಕ್ತರ ಸರತಿ ಸಾಲು ಕಂಡು ಬಂತು. ಸಂಜೆ ಸರ್ವಾಲಂಕಾರದೊಂದಿಗೆ ಮಹಾಮಂಗಳಾರತಿ ನಡೆಯಿತು.