ಗೊಲ್ಲರಹಳ್ಳಿಯಲ್ಲಿ ಶ್ರೀಮಹದೇಶ್ವರಸ್ವಾಮಿ ಹಾಲರವಿ ಉತ್ಸವ

21hgr1
Published on

ಹಲಗೂರು: ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿ ದೀಪಾವಳಿ ಅಮಾವಾಸ್ಯೆಯ ಪ್ರಯುಕ್ತ ಮಂಗಳವಾರ ಶ್ರೀಮಲೆ ಮಹದೇಶ್ವರಸ್ವಾಮಿಗೆ ಹಾಲರವಿ ಸೇವೆ ಹಾಗೂ ಎಣ್ಣೆಮಜ್ಜನ ಸೇವೆ ನೆರವೇರಿಸಲಾಯಿತು.

ಸೋಮವಾರ ಸಂಜೆ ಶ್ರೀಮಲೆ ಮಹದೇಶ್ವರಸ್ವಾಮಿ ಮೂರ್ತಿಯನ್ನು ಶುಚಿಗೊಳಿಸಿ ರುದ್ರಾಭಿಷೇಕ, ಹಾಲರವಿ ಸೇವೆ, ಎಣ್ಣೆಮಜ್ಜನ ಸೇವೆ ನಡೆಸಿದ ನಂತರ ಹೋಮ, ಹವನ ನಡೆಸಲಾಯಿತು.

ಮಂಗಳವಾರ ಬೆಳಗಿನ ಜಾವ ಶಿಂಷಾ ನದಿ ಬಳಿ ಮಹದೇಶ್ವರಸ್ವಾಮಿಗೆ ಹೂವು, ಹೊಂಬಾಳೆ, ವಿವಿಧ ಪುಷ್ಪಗಳಿಂದ ಅಲಂಕರಿಸಿ, ಜಗದೀಶ್ ತಂಡದಿಂದ ವೀರಭದ್ರ ಕುಣಿತದೊಡನೆ ನಡೆದ ಮೆರವಣಿಗೆಯಲ್ಲಿ ದೇವರು ಹೊತ್ತ ಅರ್ಚಕರು, ಕಳಸ ಹೊತ್ತ ಮುತ್ತೈದೆಯರು ಹಾಗೂ ಹೆಣ್ಣು ಮಕ್ಕಳು ಸಾಗಿದರು.

ನಂತರ ಶ್ರೀಮಲೆ ಮಹದೇಶ್ವರಸ್ವಾಮಿ ಮೂರ್ತಿಗೆ ವಿಶೇಷವಾಗಿ ಪೂಜಾ ಕಾರ್ಯಕ್ರಮಗಳು ನಡೆದ ನಂತರ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಯಿತು.

ಅರ್ಚಕರಾದ ಜಿ.ಎಂ.ಮಹಾದೇವ ಮಾತನಾಡಿ, ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದವರಿಗೆ ಹಾಗೂ ನಾಡಿನ ಜನತೆಗೆ ಯಾವುದೇ ರೋಗ ರುಜಿನಗಳು ಬಾರದಂತೆ, ಸಕಾಲಕ್ಕೆ ಮಳೆಯಾಗಿ ರೈತರು ಸಮೃದ್ಧಿಯಾಗಿ ಬೆಳೆ ಬೆಳೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು. ಪೂಜಾ ಕಾರ್ಯಕ್ರಮವನ್ನು ಗ್ರಾಮದ ನಾಡಗೌಡರು, ಯಜಮಾನರು ಹಾಗೂ ಮುಖಂಡರ ಸಹಕಾರದಿಂದ ನಡೆಸಿರುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net