

ಹಾನಗಲ್ಲ: ತಾಲೂಕಿನಲ್ಲಿ 10 ವಿದ್ಯುತ್ ಗ್ರಿಡ್ಗಳಿದ್ದು, ನಿರಂತರ ಜ್ಯೋತಿ ಮತ್ತು ಕೊಳವೆಬಾವಿಗಳಿಗಾಗಿ ಒಟ್ಟು 134 ಮೆಗಾವಾಟ್ ವಿದ್ಯುತ್ ಬಳಕೆಯಾಗುತ್ತಿದೆ. ಆದರೆ, ಇತ್ತೀಚೆಗೆ ಕೊಳವೆಬಾವಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೊಂದಿ ಮತ್ತು ಬಾಳಂಬೀಡ ಗ್ರಾಮಕ್ಕೆ 110 ಕೆವಿ ಗ್ರಿಡ್ ಮಂಜೂರಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ತಾಲೂಕಿನಲ್ಲಿ ಸದ್ಯ 19,500 ಕೊಳವೆಬಾವಿಗಳಿದ್ದು, ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ಇರುವ ವಿದ್ಯುತ್ನಲ್ಲಿ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ರೈತರ ಪಂಪ್ಸೆಟ್ಗಳಿಗೆ ಪ್ರತಿದಿನ 7 ಗಂಟೆ ವಿದ್ಯುತ್ ಒದಗಿಸಲಾಗುತ್ತಿದೆ. ಆದರೂ, ಸಾಲದೆಂಬ ರೈತರ ಕೋರಿಕೆಯ ಹಿನ್ನೆಲೆಯಲ್ಲಿ ಹೊಸ ಗ್ರಿಡ್ಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ. ಇದರೊಂದಿಗೆ ಯಳ್ಳೂರ ಗ್ರಾಮದಲ್ಲಿ 33 ಕೆವಿ ಗ್ರಿಡ್ ಸ್ಥಾಪನೆಗೂ ಮಂಜೂರಾತಿ ದೊರಕಿದೆ. ಇದರಿಂದಾಗಿ ಮತ್ತೆ ಹೆಚ್ಚುವರಿಯಾಗಿ 30 ಮೆಗಾವಾಟ್ ವಿದ್ಯುತ್ ಹರಿದು ಬರಲಿದೆ ಎಂದರು.
ಹಾನಗಲ್ಲ ಹಾಗೂ ತಿಳವಳ್ಳಿಗಳಲ್ಲಿ 110 ಕೆವಿ ಸ್ಟೇಷನ್ಗಳಿವೆ. ಹಾನಗಲ್ಲ, ಬೆಳಗಾಲಪೇಟೆ, ಬೊಮ್ಮನಹಳ್ಳಿ, ಅಕ್ಕಿಆಲೂರು, ಆಡೂರು, ಕಲಕೇರಿ, ಶೇಷಗಿರಿ, ಲಕ್ಷ್ಮೀಪುರ ಗ್ರಾಮಗಳಲ್ಲಿ 33 ಕೆವಿ ಸ್ಟೇಷನ್ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಿದ್ಯುತ್ ಸ್ಟೇಷನ್ಗಳು ಹಾನಗಲ್ಲ ತಾಲೂಕಿನಲ್ಲಿದ್ದುದರಿಂದ ರೈತರಿಗೆ ಗುಣಮಟ್ಟದ ವಿದ್ಯುತ್ ವಿತರಣೆ ಸಾಧ್ಯವಾಗುತ್ತಿದೆ. ಗ್ರಾಮೀಣ ಪ್ರದೇಶದ ರೈತರ ಕೃಷಿ ಬದುಕು ವಿದ್ಯುತ್ ಮೇಲೆಯೇ ಅವಲಂಬಿತವಾಗಿದೆ. ನಿರಂತರ ಜ್ಯೋತಿ ಯೋಜನೆ ಇವರಿಗೆ ಸಹಕಾರಿಯಾಗುತ್ತಿದೆ ಎಂದರು.