ಗೆಜ್ಜಲಗೆರೆ ಕಾಲನಿ ನಿವಾಸಿಗಳ ಧರಣಿ

23M.D.R.1
Published on

ಮದ್ದೂರು: ಗೆಜ್ಜಲಗೆರೆ ಕಾಲನಿಯಲ್ಲಿರುವ ಸ್ಮಶಾನ ಜಾಗದಲ್ಲಿ ಅಂತ್ಯಕ್ರಿಯೆ ಮಾಡಿ ಹಾಕಿದ್ದ ಭಾವಚಿತ್ರವಿರುವ ಕಲ್ಲುಗಳನ್ನು ಹಾನಿಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಆರ್‌ಟಿಸಿಯಲ್ಲಿ ಸರ್ಕಾರಿ ಸ್ಮಶಾನವೆಂದು ನಮೂದಿಸುವಂತೆ ಒತ್ತಾಯಿಸಿ ಗೆಜ್ಜಲಗೆರೆ ಕಾಲನಿ ನಿವಾಸಿಗಳು ನಿರಂತರ ಧರಣಿ ಆರಂಭಿಸಿದ್ದಾರೆ.

ಪಟ್ಟಣದ ತಾಲೂಕು ಕಚೇರಿ ಬಳಿ ಬುಧವಾರ ಆಗಮಿಸಿದ ಕಾಲನಿಯ ಸ್ಥಳೀಯ ನಿವಾಸಿಗಳು ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿದರು. ಹಲವು ವರ್ಷಗಳಿಂದ ಸರ್ಕಾರಿ ಜಾಗದಲ್ಲಿರುವ ಸ್ಮಶಾನವನ್ನು ಆರ್‌ಟಿಸಿಯಲ್ಲಿ ಸರ್ಕಾರಿ ಸ್ಮಶಾನವೆಂದು ನಮೂದಿಸುವಂತೆ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷೃ ಮಾಡುತ್ತಿದ್ದಾರೆ ಎಂದು ದೂರಿದರು.

ಗೆಜ್ಜಲಗೆರೆ ಗ್ರಾಮದ ಗೋಮಾಳ ಸರ್ವೇ ನಂ. 203ರಲ್ಲಿ 2.30 ಗುಂಟೆ ಸರ್ಕಾರಿ ಜಮೀನಿದ್ದು ಸದರಿ ಸ್ಥಳವನ್ನು ಗೆಜ್ಜಲಗೆರೆ ಕಾಲನಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಮೀಸಲಿಡಲಾಗಿದೆ. ಕೆಲವರು ಆ ಜಾಗ ತಮ್ಮದೆಂದು ಸ್ಮಶಾನದಲ್ಲಿ ಅಳವಡಿಸಿದ್ದ ಭಾವಚಿತ್ರವುಳ್ಳ ಕಲ್ಲುಗಳು ಮತ್ತು ಅಳತೆ ಕಲ್ಲುಗಳನ್ನು ನಾಶಗೊಳಿಸಿದ್ದಾರೆಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾಲನಿ ಗ್ರಾಮಸ್ಥರಿಗೆ ಸ್ಮಶಾನವಾಗಿ ಉಪಯೋಗಿಸಬಹುದೆಂದು ತೀರ್ಮಾನವಾಗಿದ್ದು ಮತ್ತು ತಾಲೂಕು ಭೂ ಕಮಿಟಿಯಲ್ಲೂ ಸಹ ಸಾರ್ವಜನಿಕರ ಉದ್ದೇಶಕ್ಕೆ ಎಂದು ನಕ್ಷೆಯನ್ನು ತಯಾರಿಸಿ 1986-87ರಲ್ಲಿ ತಹಸೀಲ್ದಾರ್ ವರದಿ ನೀಡಿದ್ದಾರೆ. ಕೂಡಲೇ ತಮಗೆ ನ್ಯಾಯ ದೊರಕಿಸಿಕೊಡಬೇಕು. ಅಲ್ಲಿಯವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಹೇಳಿದರು.

ಅಹಿಂದ ವರ್ಗದ ತಾಲೂಕು ಅಧ್ಯಕ್ಷ ಆತಗೂರು ಲಿಂಗಯ್ಯ, ಸ್ಥಳೀಯ ನಿವಾಸಿಗಳಾದ ಜಿ.ಎನ್.ಮಂಜುನಾಥ್, ಜಿ.ಕೆ.ಶಿವಲಿಂಗಯ್ಯ, ದೇವರಾಜು, ಜಯಮ್ಮ, ಲಕ್ಷ್ಮೀ, ಪ್ರಸನ್ನ, ಜಯವೀರೇಗೌಡ, ಜಯಲಕ್ಷ್ಮಮ್ಮ, ಸರೋಜಮ್ಮ, ತಮ್ಮಯ್ಯ, ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net