

ಕೆ.ಆರ್.ಸಾಗರ: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಸಾವಲಂಬಿ ಬದುಕಿಗೆ ಸಹಕಾರಿಯಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್. ದಿನೇಶ್ ತಿಳಿಸಿದರು.
ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಅನುಷ್ಠಾನ ಸಮಿತಿಯಿಂದ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆ ಹಣ ಬಳಸಿ ವಿವಿಧ ವ್ಯಾಪಾರದಲ್ಲಿ ತೊಡಗಿರುವ ಮಹಿಳೆಯರನ್ನು ಅಭಿನಂದಿಸಿ ಅವರು ಮಾತನಾಡಿದರು. ಸರ್ಕಾರ ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ಮನೆ ಯಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತಿದೆ. ಇದನ್ನು ಉಳಿಸಿಕೊಂಡು ಸಣ್ಣ ಸಣ್ಣ ವ್ಯಾಪಾರ ಆರಂಭಿಸಿ ಸಾವಿರಾರು ಮಹಿಳೆಯರು ತಮ್ಮ ಆರ್ಥಿಕ ಜೀವನವನ್ನು ಸುಧಾರಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣದಲ್ಲೂ ಮನೆಯಲ್ಲೇ ಕುಳಿತು ಬಟ್ಟೆ , ಟೈಲರಿಂಗ್, ತರಕಾರಿ, ರಂಗೋಲಿ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ. ವಿಧವೆಯರು, ವೃದ್ಧರು, ಮಹಿಳೆಯರ ಜೀವನ ಸುಧಾರಣೆ ಕಂಡಿದೆ ಎಂದು ಹೇಳಿದರು.
ಶಿರಸ್ತೇದಾರ್ ಪೂರ್ಣಿಮಾ ಮಾತನಾಡಿ, ಪಡಿತರ ಚೀಟಿಯಲ್ಲಿ ಹೆಸರು ಬಿಟ್ಟಿದ್ದರೆ ಕರ್ನಾಟಕ ಒನ್ ಕೇಂದ್ರದಲ್ಲಿ ಸರಿಪಡಿಸಿಕೊಳ್ಳಬಹುದು. ಆದಾಯ ತೆರಿಗೆ ಪಾವತಿ ಮಾಡಿಸುತ್ತಿದ್ದವರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅವರು ಪಡಿತರ ಚೀಟಿಯನ್ನು ಒಪ್ಪಿಸಿ ಎಪಿಎಲ್‌ಗೆ ಬದಲಿಸಿಕೊಳ್ಳಬೇಕು ಎಂದರು.
ಯೋಜನಾಧಿಕಾರಿ ತ್ರಿವೇಣಿ, ಸಿಡಿಪಿಒ ಸಕಲೇಶ್ವರ್, ಗ್ರಾಪಂ ಅಧ್ಯಕ್ಷ ಬಿ.ರವಿಕುಮಾರ್, ಮಾಜಿ ಅಧ್ಯಕ್ಷ ಬಿ.ವಿ.ಸುರೇಶ್, ಪಿಡಿಒ ಕುಳ್ಳೇಗೌಡ, ಗ್ರಾಪಂ ಸದಸ್ಯೆ ಲಕ್ಷ್ಮಮ್ಮ, ಗ್ಯಾರಂಟಿ ಸಮಿತಿ ಸದಸ್ಯ ರವಿಕುಮಾರ್, ಸಂಜಯ್, ಗೌಡಹಳ್ಳಿ ದೇವರಾಜು, ಸತೀಶ್, ನಾಗರಾಜು ಬಸ್ತಿಪುರ ಇದ್ದರು.