

ಸರಗೂರು: ಪಟ್ಟಣದ ಹುಣಸೂರು-ಬೇಗೂರು ರಸ್ತೆಯ ಕಬಿನಿ ಬಲದಂಡೆ ನಾಲೆಯ ಬಳಿ ಗುರುವಾರ ಬೆಳಗ್ಗೆ ಗೂಡ್ಸ್ ಆಟೋ ಪಲ್ಟಿಯಾಗಿ 15 ಮಂದಿಗೆ ಗಾಯಗೊಂಡಿದ್ದು, ಅದರಲ್ಲಿ ಮೂವರಿಗೆ ಗಂಭೀರ ಪೆಟ್ಟಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋತ್ತೆಗಾಲ ಗ್ರಾಪಂ ವ್ಯಾಪ್ತಿಯ ಗೊತ್ತಗಾಲಹುಂಡಿ ಗ್ರಾಮದಿಂದ ಇವರೆಲ್ಲ ಬೇರೆ ಊರಿಗೆ ಶುಂಠಿ ಜಮೀನಿನ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಟೋ ಪಲ್ಟಿಯಾದ ತಕ್ಷಣ ಸಾರ್ವಜನಿಕರು ಆಟೋದ ಕೆಳಗೆ ಸಿಲುಕಿಕೊಂಡಿದ್ದವರನ್ನು ಹೊರತೆಗೆದಿದ್ದಾರೆ. ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 15 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಪಟ್ಟಣದ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಮಯಕ್ಕೆ ಸರಿಯಾಗಿ ಆಗಮಿಸದ ಆಂಬುಲೆನ್ಸ್: ಬೆಳಗ್ಗೆ 7.30ರಲ್ಲಿ ಅಪಘಾತ ಸಂಭವಿಸಿದ್ದು, ವಿಷಯ ತಿಳಿಸಿದರೂ 9 ಗಂಟೆಯಾದರೂ ಸ್ಥಳಕ್ಕೆ ಆಂಬುಲೆನ್ಸ್ ಬರಲಿಲ್ಲ. ಎಲ್ಲ ಕಡೆಗೂ ಮುಖಂಡರು ಆಂಬುಲೆನ್ಸ್‌ಗೆ ಕರೆ ಮಾಡಿ ತಿಳಿಸಿದರೂ ಅಲ್ಲಿದ್ದೇವೆ, ಇಲ್ಲಿದ್ದೇವೆ ಎಂದು ಹೇಳುತ್ತಿದ್ದರೇ ಹೊರತು ಸ್ಥಳಕ್ಕೆ ಯಾರೂ ಆಗಮಿಸಲಿಲ್ಲ. ಆರೋಗ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕರೆ ಮಾಡಿ ತಿಳಿಸಿದರೂ ಅವರೂ ಬರಲಿಲ್ಲ, ಕೊನೆಗೆ ಟೆಂಪೋದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದರು.
ಅಪಘಾತದಲ್ಲಿ 15 ಮಂದಿ ಗಾಯಗೊಂಡಿದ್ದಾರೆ. 3 ಮಹಿಳೆಯರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. 12 ಜನರಿಗೆ ವಿಎಂಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಾ.ಶರತ್, ತಾಲೂಕು ಪ್ರಭಾರ ಆರೋಗ್ಯ ಅಧಿಕಾರಿ