

ಬೆಳಗಾವಿ: ಜಿಲ್ಲಾ ಶಿಕ್ಷಕರ ಬಹುದಿನಗಳ ಬೇಡಿಕೆಯಾಗಿದ್ದ ಗುರುಭವನ ನಿರ್ಮಾಣಕ್ಕಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುತುವರ್ಜಿ ವಹಿಸಿದ ಫಲವಾಗಿ ಹಿಂಡಲಗಾ ಗಣಪತಿ ಮಂದಿರದ ಬಳಿ 17 ಗುಂಟೆ ಜಾಗ ಮಂಜೂರಾಗಿದ್ದು, ಮಂಗಳವಾರ ಆದೇಶಪತ್ರ ಹಸ್ತಾಂತರಿಸಲಾಯಿತು.
ಕುವೆಂಪು ನಗರದ ಸಚಿವರ ಗೃಹಕಚೇರಿಯಲ್ಲಿ ಮಂಗಳವಾರ ಡಿಡಿಪಿಐ ಲೀಲಾವತಿ ಹಿರೇಮಠ ಹಾಗೂ ಶಿಕ್ಷಕ ಸಂಘದ ಪದಾಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆದೇಶಪತ್ರ ಹಸ್ತಾಂತರಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಶಿಕ್ಷಕರ ಸಂಘದ ಬಹುದಿನಗಳ ಬೇಡಿಕೆಯನ್ನು ಸಚಿವರು ಈಡೇರಿಸಿದ್ದಾರೆ. ನೀಡಿದ ಭರವಸೆಯಂತೆ ಜಾಗ ಮಂಜೂರು ಮಾಡಿಸಿದ್ದಾರೆ. ಇಡೀ ರಾಜ್ಯಕ್ಕೆ ಮಾದರಿಯಾದ ಕೆಲಸವನ್ನು ಸಚಿವರು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ್ ಹೆಬ್ಳಿ ಮಾತನಾಡಿ, ಸಚಿವರು ನೀಡಿದ ಭರವಸೆಯಂತೆ ಅತ್ಯಂತ ಕಡಿಮೆ ಅವಧಿಯಲ್ಲಿ ಜಾಗ ಮಂಜೂರಾಗಿದೆ. ಗುರುಭವನ ನಿರ್ಮಾಣಕ್ಕೆ ಶೀಘ್ರವೇ ಶಂಕುಸ್ಥಾಪನೆ ಮಾಡಲಾಗುವುದು ಎಂದರು.
ಶಿಕ್ಷಕರ ಸಂಘಟನೆ ಪರವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಚನ್ನರಾಜ ಹಟ್ಟಿಹೊಳಿಯವರನ್ನು ಸನ್ಮಾನಿಸಲಾಯಿತು. ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ, ಗ್ರಾಮೀಣ ಶಿಕ್ಷಣಾಧಿಕಾರಿ ಆಂಜನೇಯ ಇತರರಿದ್ದರು.