

ಬಾಗಲಕೋಟೆ: ಶ್ರಾವಣ ಮಾಸ ಹಿನ್ನಲೆಯಲ್ಲಿ ಶನಿವಾರ ಬೆಳಗಿನ ಜಾವ ಗುರುಬಸವ ಮಹಾಸ್ವಾಮಿಗಳ ಶೀಲಾ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾಷ್ಟಕಂ, ಲಿಂಗಾಷ್ಟಕಂ ಹಾಗೂ ಶಿವ ಪಂಚಾಕ್ಷರಮಂತ್ರ ಸ್ತೋತ್ರಂ, ಶಿವ ಸಹಸ್ರನಾಮ ಸ್ತೋತ್ರಗಳಿಂದ ಪೂಜೆ ಸಲ್ಲಿಸಿ ನಂತರ ಪುಷ್ಪಾಲಂಕಾರ, ಮಹಾಮಂಗಳಾರತಿ ಮಾಡಲಾಯಿತು.
ಚರಂತಿಮಠದ ಪ್ರಭು ಸ್ವಾಮೀಜಿ, ಟೀಕಿನ ಮಠದ ಮಲ್ಲಿಕಾರ್ಜುನ ದೇವರು ಸಾನಿಧ್ಯದಲ್ಲಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಬೀಳೂರ ಮಹಾಸ್ವಾಮಿಗಳ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಹಾಗೂ ಸಂಘದ ಸದಸ್ಯರುಗಳು ಪೂಜೆ ಸಲ್ಲಿಸಿದರು.
ನಂತರ ಬೀಳೂರ ಅಜ್ಜನವರ ಪಲ್ಲಕ್ಕಿ ಉತ್ಸವ ಕರಡಿ ಮಜಲು ವಾದ್ಯ ವೈಭವದೊಂದಿಗೆ ಆರಂಭಗೊಂಡರು ವಿವಿಧೆಡೆ ಸಂಚರಿಸಿತು. ನಂತರ ಬನ್ನಿ ಮಂಟಪ ತಲುಪಿ ಪೂಜೆ ಸಲ್ಲಿಸಲಾಯಿತು. ರಂಗೋಲಿ, ತರಳಿ, ತೋರಣಗಳಿಂದ ಶೃಂಗರಿಸಲಾಗಿತ್ತು. ಮಧ್ಯಾಹ್ನ ವೀರಭದ್ರೇಶ್ವರ ಸಾಂಸ್ಕೃತಿಕ ಭವನ ಹಾಗೂ ಬಸವೇಶ್ವರ ಮಂಗಲ ಭವನದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಜನ ಅನ್ನ ಪ್ರಸಾದ ಸ್ವೀಕರಿಸಿದರು.