ಗುರುಗಳ ಮಾರ್ಗದರ್ಶನ ಪಾಲಿಸಿ

15 HANUR 3
Published on

ಹನೂರು: ಯಾವುದೇ ಸಮುದಾಯವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಬೇಕಾದರೆ ಗುರುಗಳ ಪಾತ್ರ ಅಪಾರ. ಆದ್ದರಿಂದ ಪ್ರತಿಯೊಬ್ಬರೂ ಗುರುಗಳ ಮಾರ್ಗದರ್ಶನವನ್ನು ಪಾಲಿಸಬೇಕು ಎಂದು ಮಾಜಿ ಶಾಸಕ ಆರ್.ನರೇಂದ್ರ ಸಲಹೆ ನೀಡಿದರು.

ತಾಲೂಕಿನ ಎಲ್ಲೇಮಾಳ ಗ್ರಾಮದಲ್ಲಿ ಡಿಸೆಂಬರ್ 20 ಮತ್ತು 21ರಂದು ಇಸ್ತಮಾ ಕಾರ್ಯಕ್ರಮ ಆಯೋಜನೆ ಸಂಬಂಧ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪ್ರತಿವರ್ಷ ಜಿಲ್ಲೆಯ ಒಂದು ಕಡೆ ಇಸ್ತಮಾ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ವರ್ಷ ತಾಲೂಕಿನ ಎಲ್ಲೇಮಾಳ ಗ್ರಾಮದಲ್ಲಿ ಲಕ್ಷಾಂತರ ರೂ.ವ್ಯಯಿಸಿ 20 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಲು ಕಾರ್ಯಕ್ರಮವನ್ನು ರೂಪಿಸಿರುವುದು ಮೆಚ್ಚುಗೆ ಸಂಗತಿ. ಕಾರ್ಯಕ್ರಮದಲ್ಲಿ ಧರ್ಮಗುರುಗಳು ನೀಡುವ ಸಂದೇಶವನ್ನು ಎಲ್ಲರೂ ಪಾಲಿಸುವುದು ಅಗತ್ಯ. ರಾಮಾಯಣ, ಮಹಾಭಾರತ, ಕುರ್‌ಅನ್, ಬೈಬಲ್ ಹಾಗೂ ಇತರ ಗ್ರಂಥಗಳಲ್ಲೂ ಇತರರಿಗೂ ಒಳಿತನ್ನು ಬಯಸುವುದನ್ನೇ ತಿಳಿಸುತ್ತದೆ. ಗುರುಗಳ ಮಾರ್ಗದರ್ಶನ ಅವಶ್ಯಕ ಎಂದು ಸಾರುತ್ತದೆ. ಬಸವಣ್ಣನವರು 12ನೇ ಶತಮಾನದಲ್ಲಿಯೇ ದಯವಿಲ್ಲದ ಧರ್ಮವಾವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳಿಗೂ, ದಯವೇ ಧರ್ಮದ ಮೂಲವಯ್ಯ ಎಂದು ಜಗತ್ತಿಗೆ ಸಾರಿದ್ದಾರೆ. ಹಾಗಾಗಿ ಯಾವುದೇ ಧರ್ಮವಾದರೂ ಪ್ರತಿಯೊಬ್ಬರೂ ದಯೆಯನ್ನು ಹೊಂದಬೇಕು. ಜತೆಗೆ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯುವುದು ಉತ್ತಮ ಸಮಾಜಕ್ಕೆ ಮಾದರಿ. ಗುರುಗಳು ನೀಡುವ ಸಂದೇಶವನ್ನು ಅಳವಡಿಸಿಕೊಂಡಾಗ ಜೀವನ ಸಾರ್ಥಕತೆ ಎನಿಸುತ್ತದೆ. ಆದ್ದರಿಂದ ನಡೆಯುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದ ಜಿಲ್ಲಾ ಕಮಿಟಿ ಸದಸ್ಯರಾದ ಅಬೂಬಕರ್ ಸಿದ್ಧಿಕ್, ಬಸೀರ್ ಆಹಮದ್, ಚಾಮುಲ್ ನಿರ್ದೇಶಕ ಶಾಹುಲ್ ಆಹಮದ್, ಗ್ರಾಮ ಕಮಿಟಿ ಸದಸ್ಯರಾದ ಸೈಯದ್ ಫೀರ್, ಸೈಯದ್ ರಸುಲ್ಲಾ, ಪಪಂ ಸದಸ್ಯರಾದ ಗಿರೀಶ್‌ಕುಮಾರ್, ಹರೀಶ್‌ಕುಮಾರ್, ಮುಖಂಡರಾದ ಮಾದೇಶ್, ರಾಜು, ನಾಗೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net