ಗುರಿ ಇಟ್ಟುಕೊಂಡು ಮುನ್ನಡೆದರೆ ಯಶಸ್ಸು ಖಚಿತ

1ark4
ಅರಕಲಗೂಡಿನಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಸಮಾರಂಭವನ್ನು ಹಾಸನ ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ ಉದ್ಘಾಟಿಸಿದರು. ದೇವರಾಜು, ಡಿ.ಪಿ. ಮನು, ದಿನೇಶ್, ನಿಂಗಯ್ಯ, ಸಂಜೀವ್ ಕುಮಾರ್ ಇತರರಿದ್ದರು.
Published on

ಅರಕಲಗೂಡು: ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸಾಧನೆಯ ಗುರಿ ಇಟ್ಟುಕೊಂಡು ಮುನ್ನಡೆದಾಗ ಯಶಸ್ಸು ಖಚಿತ ಎಂದು ಆದಿಚುಂಚನಗಿರಿ ಮಠದ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಹಾಗೂ ಬಿಜಿಎಸ್ ಪಬ್ಲಿಕ್ ಶಾಲೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ. ಸೋಲಿನಿಂದ ಕುಗ್ಗುವ ಅಗತ್ಯವಿಲ್ಲ. ಸೋಲೆ ಗೆಲುವಿಗೆ ಸೋಪಾನ ಎಂದು ಆತ್ಮವಿಶ್ವಾಸ ರೂಢಿಸಿಕೊಂಡು ಸಾಧನೆಯತ್ತ ಗಮನ ಹರಿಸಿದಾಗ ಗೆಲುವು ದೊರೆಯುತ್ತದೆ. ಬಿಜಿಎಸ್ ಸಂಸ್ಥೆ ಶಿಕ್ಷಣಕ್ಕೆ ನೀಡಿದಷ್ಟೆ ಮಹತ್ವವನ್ನು ಕ್ರೀಡಾ ಚಟುವಟಿಕೆಗಳಿಗೂ ನೀಡುತ್ತಾ ಬಂದಿದೆ ಎಂದರು.

ಕ್ರೀಡಾ ಜ್ಯೋತಿ ಸ್ವೀಕರಿಸಿದ ಜಾವೆಲಿನ್ ಕ್ರೀಡಾಪಟು ಡಿ.ಪಿ. ಮನು ಮಾತನಾಡಿ, ವಿದ್ಯಾರ್ಥಿಗಳು ಅವರಿವರ ಮಾತಿಗೆ ಕಿವಿಗೊಡದೆ ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಮುನ್ನಡೆಯುವುದು ಅಗತ್ಯ. ನನ್ನ ಕ್ರೀಡಾ ಚಟುವಟಿಕೆ ಕುರಿತು ಹಲವರು ಹಲವು ರೀತಿಯಲ್ಲಿ ಹೇಳಿದರೂ ತಲೆಗೆ ಹಾಕಿಕೊಳ್ಳದೆ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ನಾನು ಉನ್ನತ ಸ್ಥಾನಕ್ಕೆ ಏರಲು ಸಹಾಯಕವಾಯಿತು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ಮಾತನಾಡಿದರು. ತಾಲೂಕಿನಲ್ಲೆ ಸೇವೆ ಸಲ್ಲಿಸಿ ವರ್ಗಾವಣೆಯಾದ ಕ್ರೀಡಾ ಶಿಕ್ಷಕರನ್ನು ಗೌರವಿಸಲಾಯಿತು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ದಿನೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಸ್. ನಿಂಗಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್.ಮಹೇಶ್, ಬಿಜಿಎಸ್ ಪಿಯು ಕಾಲೇಜು ಪ್ರಾಂಶುಪಾಲ ಮಹೇಶ್ ಹೊಡೆನೂರು, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರೇಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಡಿ. ಕಾಂತರಾಜ್, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್, ಬಿಜಿಎಸ್ ಪಬ್ಲಿಕ್ ಶಾಲಾ ಮುಖ್ಯಶಿಕ್ಷಕಿ ದುಲ್ಸಿನ್ ಮೆಂಡ, ಪ್ರಾಂಶುಪಾಲ ಕುಮಾರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net