ಗುಮ್ಮನಹಳ್ಳಿ ಗ್ರಾಪಂನಲ್ಲಿ ಅವಿಶ್ವಾಸ ನಿರ್ಣಯ

Published on

ಪಾಂಡವಪುರ: ತಾಲೂಕಿನ ಗುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎ.ಬಿ.ಅನಿತಾ ಅವರ ವಿರುದ್ಧ ಸಹ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದಾರೆ.

ಒಟ್ಟು 16 ಸದಸ್ಯರ ಸಂಖ್ಯಾಬಲ ಹೊಂದಿರುವ ಗ್ರಾಪಂನಲ್ಲಿ ಎ.ಬಿ.ಅನಿತಾ ಅವರು ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಉಪಾಧ್ಯಕ್ಷರಾಗಿ 15 ತಿಂಗಳು ಪೂರೈಸಿದ ಬಳಿಕ ಗ್ರಾಪಂನ ಸದಸ್ಯರು ಉಪಾಧ್ಯಕ್ಷೆ ಎ.ಬಿ.ಅನಿತಾ ಅವರ ವಿರುದ್ಧ ಅವಿಶ್ವಾಸ ಮಂಡನೆ ಮಾಡುತ್ತಿದ್ದೇವೆ ಎಂದು ಸಹಿ ಹಾಕಿದ ಪತ್ರವನ್ನು ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರಿಗೆ ನೀಡಿದ್ದರು. ಉಪವಿಭಾಗಾಧಿಕಾರಿ 15 ದಿನ ಕಾಲಾವಕಾಶ ನೀಡಿ ಗುರುವಾರ ಅವಿಶ್ವಾಸ ಮಂಡನೆಗೆ ದಿನಾಂಕ ನಿಗದಿಪಡಿಸಿ ಎಲ್ಲ ಸದಸ್ಯರಿಗೂ ನೋಟಿಸ್ ನೀಡಿ ಅವಿಶ್ವಾಸ ನಿರ್ಣಯ ಮಂಡನೆ ಸಭೆಗೆ ಹಾಜರಾಗುವಂತೆ ಸೂಚಿಸಿದ್ದರು.

ಅದರಂತೆ ಗುರುವಾರ ನಡೆದ ಅವಿಶ್ವಾಸ ನಿರ್ಣಯ ಮಂಡನೆ ಸಭೆಗೆ ಒಟ್ಟು 16 ಸದಸ್ಯರ ಪೈಕಿ ಅಧ್ಯಕ್ಷ ಎಂ.ಎಸ್.ರಘು ಹಾಗೂ ಉಪಾಧ್ಯಕ್ಷೆ ಎ.ಬಿ.ಅನಿತಾ ಸೇರಿದಂತೆ 14 ಸದಸ್ಯರು ಭಾಗವಹಿಸಿದ್ದರು. ಲಕ್ಷ್ಮಮ್ಮ ಹಾಗೂ ಸ್ವಾಮಿ ಗೈರಾಗಿದ್ದರು.

ಉಪವಿಭಾಗಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಅವಿಶ್ವಾಸ ನಿರ್ಣಯ ಮಂಡನೆ ಸಭೆಯಲ್ಲಿ ಉಪಾಧ್ಯಕ್ಷೆ ಎ.ಬಿ.ಅನಿತಾ ಅವರ ವಿರುದ್ಧವಾಗಿ ಭಾಗವಹಿಸಿದ್ದ 14 ಸದಸ್ಯರ ಪೈಕಿ 13 ಸದಸ್ಯರು ಕೈ ಮೇಲೆತ್ತುವ ಮೂಲಕ ಅವಿಶ್ವಾಸ ಮಂಡನೆ ಮಾಡಿದರು.

ಸದಸ್ಯರ ಸಂಖ್ಯಾಬಲ ಉಪಾಧ್ಯಕ್ಷೆ ಎ.ಬಿ.ಅನಿತಾ ಅವರ ವಿರುದ್ಧ ಇದ್ದ ಕಾರಣ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರನ್ನು ಎ.ಬಿ. ಅನಿತಾ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದರು. ಖಾಲಿಯಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಶೀಘ್ರವೇ ಚುನಾವಣೆ ನಿಗದಿಪಡಿಸಲಾಗುವುದು ಎಂದು ಘೋಷಿಸಿದರು. ಮುಂದಿನ ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಸಲು ಹೇಮಾವತಿ ನೀರಾವರಿ ನಿಗಮದ ಎಇಇ ಪುಟ್ಟಮಾಯಿಗೌಡ ಅವರನ್ನು ಚುನಾವಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net