

ಬಾಗಲಕೋಟೆ: ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ನಗರಸಭೆಯ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಆಯುಕ್ತ ಆರ್.ವಾಸಣ್ಣ ನಡುವಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಆಯುಕ್ತರು ಗೌರವ ನೀಡುತ್ತಿಲ್ಲ. ತಮ್ಮ ಮನಸ್ಸಿಗೆ ಬಂದ್ದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಅಧ್ಯಕ್ಷೆ ಜ್ಯೋತಿ ಭಜಂತ್ರಿ ಆಯುಕ್ತರ ವಿರುದ್ಧ ಕಿಡಿಕಾರಿದ್ದಾರೆ.
ನಗರಭೆಯಲ್ಲಿ ಶುಕ್ರವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಆಯುಕ್ತ ಆರ್.ವಾಸಣ್ಣ ಆರಂಭ ಮೂರು ತಿಂಗಳು ನಮ್ಮೊಂದಿಗೆ ಉತ್ತಮವಾಗಿ ನಡೆದುಕೊಂಡಿದ್ದಾರೆ. ಎಲ್ಲ ವಿಷಯ ಗಮನಕ್ಕೆ ತಂದು ಸಹಿ ಪಡೆದುಕೊಳ್ಳುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆ ತಮ್ಮ ಕಚೇರಿಗೆ ಕರೆಯಿಸಿ ನಾಲ್ಕು ಕಡತಗಳಿಗೆ ಸಹಿ ಮಾಡುವಂತೆ ಹೇಳಿದರು. ನನ್ನ ಕಚೇರಿಗೆ ಕಳುಹಿಸಿ ಕಾಮಗಾರಿ ಬಗ್ಗೆ ಸಂಬಂಧಪಟ್ಟ ವಾರ್ಡ್ ಸದಸ್ಯರಿಗೆ ಮಾಹಿತಿ ಪಡೆದುಕೊಂಡು ಬಿಲ್ ಪಾವತಿಗೆ ಸಹಿ ಮಾಡುತ್ತೇನೆ ತಿಳಿಸಿದೆ. ಆದರೇ ಆಯುಕ್ತರು ನನ್ನ ಸಹಿ ಇಲ್ಲದೆ ಕಡತ ಮುಂದುವರೆಸಿದರು. ನಂತರ ಯಾವುದೇ ಕಡತಗಳಿಗೆ ಸಹಿ ಪಡೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರಶ್ನೆ ಮಾಡಿದರೇ ತಮ್ಮ ಸಹಿ ಅಗತ್ಯವಿಲ್ಲ ಅಂತ ಹೇಳುತ್ತಿದ್ದಾರೆ. ಸರ್ಕಾರ ಸುತ್ತೂಲೆ ಕೊಡಿ ಅಂದರು ನಮಗೆ ತೋರಿಸುತ್ತಿಲ್ಲ. ನನಗೆ ಮಾಹಿತಿ ಇರುವಂತೆ ರಾಜ್ಯದ ಯಾವುದೇ ನಗರಸಭೆಯಲ್ಲಿ ಈ ರೀತಿ ಆಯುಕ್ತರು ನಡೆದುಕೊಂಡಿಲ್ಲ. ಅಧ್ಯಕ್ಷರು ಸಹಿ ಇಲ್ಲದೆ ಕಡತಗಳು ಮುಂದು ಸಾಗುತ್ತೀವೆ. ವಿವಿಧ ಕಾಮಗಾರಿ ಬಿಲ್ ಪಾವತಿ ಮಾಡುತ್ತಿದ್ದಾರೆ. ಈ ಬಗ್ಗೆ ನೋಟಿಸ್ ನೀಡಿದೆ. ಅದಕ್ಕೆ ಉತ್ತರ ಬರೆದರು. ಬೇರೋಂದು ನೋಟ್‌ಬುಕ್ ಮಾಡಿ ಅದಕ್ಕೆ ಸಹಿ ಮಾಡಿ ಎನ್ನುತ್ತಾರೆ. ನಾವೇನು ಚಿಕ್ಕ ಮಕ್ಕಳಾ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಬೆದರಿಕೆ ಹಾಕುತ್ತಾರೆ:
ಈ ಬಗ್ಗೆ ನಗರಸಭೆ ಸದಸ್ಯರು ಆಯುಕ್ತರೊಂದಿಗೆ ಚರ್ಚೆ ನಡೆಸಿ ತಾವು ಮಾಡುತ್ತಿರುವುದು ಸರಿಯಲ್ಲ. ಅಧ್ಯಕ್ಷರಿಗೆ ಗೌರವ ನೀಡಬೇಕು. ಅವರ ಸಹಿ ಪಡೆದುಕೊಳ್ಳಬೇಕು ಅಂತ ಹೇಳಿದರು. ಸದಸ್ಯರೆಲ್ಲ ಈ ರೀತಿ ಬಿಲ್ ಪಾಸು ಮಾಡಿಕಳುಹಿಸಿದರೆ ಹೇಗೆ ಎಂದು ಪ್ರಶ್ನಿಸಿದದರು.ಈ ವೇಳೆ ಆಯುಕ್ತ ಆರ್.ವಾಸಣ್ಣ, ನಾನು ಮುಖ್ಯಮಂತ್ರಿಗಳ ಊರಲ್ಲಿ ಕೆಲಸ ಮಾಡಿ ಬಂದಿದ್ದೇನೆ. ಮುಖ್ಯಮಂತ್ರಿಗಳಿಗೆ ಒಂದು ಹೂವು, ಬೊಕ್ಕೆ ಕೊಟ್ಟಿಲ್ಲ. ಯಾವ ಮಂತ್ರಿಗಳಿಗೂ ಹೆದರಲ್ಲ, ನಿಮ್ಮ ಸದಸ್ಯತ್ವ ಕೂಡ ರದ್ದು ಮಾಡುವ ಅಧಿಕಾರ ನನಗೆ ಇದೆ ಎಂದು ಬೆದರಿಕೆ ಹಾಕಿದರು ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ತನಿಖೆ ನಡೆಸಲಿ:
ನಗರದ ವಿವಿಧ ವಾರ್ಡ್ ನಲ್ಲಿ ಆಗುವ ಪ್ರತಿ ಕಾಮಗಾರಿಯ ಬಿಲ್ ಹಾಗೂ ಕೆಲಸದ ಕುರಿತು ಅಧ್ಯಕ್ಷರೊಂದಿಗೆ ಚರ್ಚೆ ಮಾಡದೇ ನಗರಸಭೆಯ ಆಯುಕ್ತರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಗೌರವ ನೀಡದ ಆಯುಕ್ತರು ನನ್ನ ಸಹಿ ಇಲ್ಲದೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುತ್ತಿದ್ದಾರೆ. ಇದರ ಹಿಂದೆ ಏನೋ ಡೀಲ್ ಇರಬಹುದು. ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಕೋರುತ್ತೇನೆ. ಲೋಕಾಯುಕ್ತರ ಬಳಿ ಪ್ರಕರಣ ದಾಖಲಿಸಲು ಚಿಂತನೆ ನಡೆಸುತ್ತೇನೆ ಎಂದು ಜ್ಯೋತಿ ಭಜಂತ್ರಿ ತಿಳಿಸಿದರು.
ಇನ್ನು ನಗರಸಭೆ ವತಿಯಿಂದ ಬಡವರಿಗೆ ನೀಡುವ ಯೋಜನೆಗಳು ಕುರಿತು ಸಿದ್ಧ ಮಾಡುವ ಪೈಲ್‌ಗೂ ನನ್ನ ಸಹಿಸಿ ಪಡೆದುಕೊಂಡಿಲ್ಲ. ಹಾಗೇ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಜಿಲ್ಲಾಽಕಾರಿ ಪಿ.ಸುನೀಲಕುಮಾರ ಕೂಡಾ ಅಪ್ರೋವಲ್ ಮಾಡಿದ್ದಾರೆ. ಅಧ್ಯಕ್ಷರ ಸಹಿ ಅಗತ್ಯತೆ ಬಗ್ಗೆ ಪೌರಾಡಳಿತ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದೆ, ಆಯುಕ್ತರ ವರ್ತನೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಸ್ವಚ್ಛತೆ ಕುರಿತು ಸಂಚರಿಸಲು ಬನ್ನಿ ಎಂದರೂ ಕೂಡ ಬರುತ್ತಿಲ್ಲ. ನಗರಸಭೆಯಲ್ಲಿ ಸ್ವಚ್ಛತೆ ನಿರ್ಲಕ್ಷ್ಯವಾಗುತ್ತಿದೆ. ಆಡಳಿತ ಹಳಿ ತಪ್ಪುತ್ತಿದೆ. ಆದರು ನಗರಸಭೆ ಸದಸ್ಯರು ತಮ್ಮ ವಾರ್ಡಿನ ಸಮಸ್ಯೆ ಬಗ್ಗೆ ಹೇಳಿದಾಗ, ಸಾರ್ವಜನಿಕರು ಬಂದಾಗ ಸ್ಪಂದನೆ ಮಾಡುವುದು ನಾನು ನಿಲ್ಲಿಸಿಲ್ಲ ಎಂದು ಹೇಳಿದರು.