ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಿ

Published on

ಆಲೂರು: ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕೂಡಲೇ ಕಾಯಂಗೊಳಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೂರ್ಯ ತನ್ನ ಕಿರಣವನ್ನು ಭೂಮಿಗೆ ಸ್ಪರ್ಶಿಸುವ ಮೊದಲೇ ಪೌರ ಕಾರ್ಮಿಕರು ಭೂಮಿಯನ್ನು ಸ್ವಚ್ಛಗೊಳಿಸುತ್ತಾರೆ. ಪೌರಕಾರ್ಮಿಕರ ಸೇವೆ ಸ್ಥಗಿತಗೊಂಡರೆ ಇಡೀ ಪರಿಸರ ಅಶುಚಿತ್ವಗೊಳ್ಳುತ್ತದೆ. ಸಾರ್ವಜನಿಕರ ಆರೋಗ್ಯಕ್ಕೆ ಸದಾ ದುಡಿಯುವ ಇವರ ಸೇವೆ ಶ್ಲಾಘನೀಯ. ಇವರು ತಮ್ಮ ಕುಟುಂಬದ ಎಲ್ಲ ಕಾರ್ಯಗಳನ್ನು ಬದಿಗೊತ್ತಿ ಸಾರ್ವಜನಿಕರ ಆರೋಗ್ಯಕ್ಕೆ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿದ್ದಾರೆ.ಇವರ ಸೇವೆಯನ್ನು ಸ್ಮರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾದಪೂಜೆ ಮಾಡಿದ್ದು ಹಾಗೂ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಹಲವು ಕಾರ್ಮಿಕರನ್ನು ಕಾಯಂಗೊಳಿಸಿದ್ದನ್ನು ಸ್ಮರಿಸಬಹುದು ಎಂದರು. ಸದ್ಯದಲ್ಲೇ ಪಟ್ಟಣ ಪಂಚಾಯಿತಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ರೂಪಿಸಲಾಗುವುದು ಎಂದರು.

ಮುಖ್ಯಾಧಿಕಾರಿ ಸ್ಟೀಪನ್‌ಪ್ರಕಾಶ್ ಮಾತನಾಡಿ, ಸದ್ಯ 12 ಪೌರಕಾರ್ಮಿಕರು ಕಾಯಂ ಮತ್ತು 8 ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಸುರಕ್ಷತೆ ಬಗ್ಗೆ ಜಾಗೃತಿ ವಹಿಸಲಾಗಿದೆ ಎಂದರು.

ಪೌರಕಾರ್ಮಿಕರಾದ ಗಣೇಶ, ಚಿನ್ನರಂಗಸ್ವಾಮಿ, ಸುಬ್ಬಮ್ಮ, ನಾಗರತ್ನ, ಸುನೀತಾ, ಪಾಲಾಕ್ಷ, ಕೃಷ್ಣೇಗೌಡ, ಶಶಿಕುಮಾರ, ಆನಂದ, ಲಕ್ಷ್ಮಣ, ಮಂಜುನಾಥ, ಲೋಕೇಶ, ಪುರುಷೊತ್ತಮ, ಯೋಗೀಶ, ರವಿಕುಮಾರ, ರೇವಣ್ಣ, ಅನುಕುಮಾರ, ಚಂದು, ರಾಜಶೇಖರ, ಮುತ್ತುರಾಜ್, ಕಿರಣ್, ಪ್ರತಾಪ, ಷಣ್ಮುಖ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ.ಪಂ. ಮಾಜಿ ಅಧ್ಯಕ್ಷೆ ವೇದಾಸುರೇಶ್, ಸದಸ್ಯರಾದ ತೌಫಿಕ್, ಧರ್ಮ, ತಾಹಿರಾಬೇಗಂ, ಸ್ನೇಕ್‌ಬಾಬು, ಕಚೇರಿ ಸಿಬ್ಬಂದಿ ಮಂಜುನಾಥ್, ಜಯಲಕ್ಷ್ಮೀ, ರಾಜಲಕ್ಷ್ಮೀ, ದೀಪಿಕಾ, ಭಾರತಿ, ಲಲಿತ, ಗಂಗಾಧರ ಮತ್ತು ಲಕ್ಷಣ್ ಹಾಜರಿದ್ದರು.

ಪ.ಪಂ. ಸಭಾಂಗಣದಲ್ಲಿ ಪೌರಕಾರ್ಮಿಕರನ್ನು ಶಾಸಕ ಸಿಮೆಂಟ್ ಮಂಜು ಸನ್ಮಾನಿಸಿದರು. ಸ್ಟೀಪನ್‌ಪ್ರಕಾಶ್, ವೇದಾಸುರೇಶ್, ತೌಫಿಕ್, ಧರ್ಮ, ತಾಹಿರಾಬೇಗಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net