

ಬೆಟ್ಟದಪುರ: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡಿ ಹಣ ನೀಡುತ್ತಿರುವುದು ರೈತರ ಅನುಕೂಲಕ್ಕಾಗಿಯೇ ಹೊರತು ವ್ಯಾಪಾರಿಗಳಿಗೆ ನೀಡುವ ಉದ್ದೇಶದಿಂದಲ್ಲ. ರೈತರು ಗುಣಮಟ್ಟದ ರಾಗಿ ಮಾರಾಟ ಮಾಡಿ ಯೋಜನೆ ಸದುಪಯೋಗ ಮಾಡಿಕೊಳ್ಳಿ ಎಂದು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.
ಬೆಟ್ಟದಪುರದ ಎಪಿಎಂಸಿ ಆವರಣದಲ್ಲಿ ಸೋಮವಾರ ಬೆಂಬಲ ಯೋಜನೆಯಡಿ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಕೆಲ ರೈತರು ಸರ್ಕಾರ ನೀಡುವ ಯೋಜನೆಯ ಸದುಪಯೋಗ ಪಡೆದುಕೊಳ್ಳದೆ ಯಾರೋ ಒಬ್ಬ ವ್ಯಾಪಾರಿಗೆ ಪಹಣಿ, ಆಧಾರ್ ಕಾರ್ಡ್ ನೀಡುವ ಮೂಲಕ ಆತ ಹಣ ಮಾಡಿಕೊಳ್ಳಲು ಅವಕಾಶ ನೀಡುತ್ತಿರುವುದು ಬೇಸರದ ಸಂಗತಿ. ಅಧಿಕಾರಿಗಳು ಯಾವುದೇ ಕಾರಣಕ್ಕೂ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಖರೀದಿ ಪ್ರಕ್ರಿಯೆ ಬಳಿ ಸುಳಿಯದಂತೆ ಕ್ರಮಕೈಗೊಳ್ಳಬೇಕು ಎಂದರು.
ಆಹಾರ ಇಲಾಖೆಯ ಶಿರಸ್ತೇದಾರ್ ಸಣ್ಣಸ್ವಾಮಿ ಮಾತನಾಡಿ, ರಾಗಿ ಖರೀದಿ ಕೇಂದ್ರದಲ್ಲಿ ಕೂಲಿಯವರು ರೈತರಿಂದ ಅಧಿಕ ಹಣ ವಸೂಲಿ ಮಾಡುವುದು, ಶೋಷಣೆ ಮಾಡುವುದನ್ನು ತಡೆಗಟ್ಟುವಲ್ಲಿ ಎಪಿಎಂಸಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಅವರ ಬೇಜವಾಬ್ದಾರಿ ಪ್ರದರ್ಶನದಿಂದ ರೈತರು ಸಮಸ್ಯೆ ಅನುಭವಿಸಬೇಕಾಗಿದೆ. ಖರೀದಿ ಪ್ರಕ್ರಿಯೆ, ಕೂಲಿಗೆ ಗುತ್ತಿಗೆ ಸಂಬಂಧಪಟ್ಟಂತೆ ಎಲ್ಲ ಸೂಚನೆಗಳನ್ನು ನೋಟಿಸ್ ಬೋರ್ಡ್‌ನಲ್ಲಿ ಕಡ್ಡಾಯವಾಗಿ ಹಾಕಿ ಪ್ರದರ್ಶನ ಮಾಡಬೇಕು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಒಬ್ಬ ರೈತರಿಗೆ ಸಮಸ್ಯೆಯಾದರೆ ತಾಲೂಕು ಆಡಳಿತದಿಂದ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಬೆಟ್ಟದಪುರ ಖರೀದಿ ಕೇಂದ್ರದ ಅಧಿಕಾರಿ ಲೋಕನಾಥ್ ಮಾತನಾಡಿ, ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಸುತ್ತಿದೆ. ನೋಂದಣಿ ಮಾಡುವ ವೇಳೆ, ರಾಗಿ ಮಾರಾಟ ಮಾಡಿ ಬಿಲ್ಲಿಂಗ್ ಮಾಡಿಸುವ ವೇಳೆ ಒಟ್ಟು ಎರಡು ಸಲ ಹೆಬ್ಬೆಟ್ಟು ಕೊಟ್ಟು ದೃಢೀಕರಣ ಮಾಡಬೇಕು. ರಾಗಿ ಖರೀದಿ ಸಂದರ್ಭ ಗುಣಮಟ್ಟ ಪರೀಕ್ಷೆಗಾಗಿ ಮಿಷನ್ ವ್ಯವಸ್ಧೆ ಮಾಡಲಾಗಿದೆ. ಹಾಗಾಗಿ ರೈತರು ಗುಣಮಟ್ಟದ ರಾಗಿ ನೀಡಬೇಕು ಎಂದರು.
ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಕೆಪಿಸಿಸಿ ಸದಸ್ಯ ಅನಿಲ್‌ಕುಮಾರ್, ಎಪಿಎಂಸಿ ಜಿಲ್ಲಾ ವ್ಯವಸ್ಥಾಪಕ ಸೋಮಯ್ಯ, ಆಹಾರ ಇಲಾಖೆ ನಿರೀಕ್ಷಕ ಮಂಜುನಾಥ್, ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಪಿಡಿಒಗಳಾದ ಮಂಜುನಾಥ್, ಧನಂಜಯ್, ಮುಖಂಡರಾದ ಪುಟ್ಟರಾಜು, ಕೃಷ್ಣೇಗೌಡ, ಎಚ್.ಟಿ.ಗೋವಿಂದೇಗೌಡ, ಯೋಗೇಶಗೌಡ, ಮಹದೇವ್, ಲೋಕೇಶ್, ಕೃಷ್ಣೇಗೌಡ, ಮುಖ್ಯ ಶಿಕ್ಷಕ ಕೆ.ಸಿ.ಸತೀಶ್, ಖರೀದಿ ಕೇಂದ್ರದ ಅಧಿಕಾರಿಗಳಾದ ಲೋಕನಾಥ್, ಮಂಜುನಾಥ್, ರೈತ ಮುಖಂಡರಾದ ಸ್ವಾಮಿಗೌಡ, ಮಹದೇವ್, ದಶರಥ, ಆನಂದ್, ರವಿ, ಭೀಮಣ್ಣ, ವಿಜಯ್ ಅರಸ್, ಜೈಚಂದ್ರ, ಜಯರಾಮೇಗೌಡ, ನೀಲೇಗೌಡ, ಗೋವಿಂದರಾಜ್ ಇದ್ದರು.