ಗುಣಮಟ್ಟದ ಕಾಮಗಾರಿ ಮಾಡಿ

16mnd1
Published on

ಮುಂಡಗೋಡ: ಒಡ್ಡಿನ ಕಾಮಗಾರಿಯ ಅವಧಿಯಲ್ಲಿ ಅಧಿಕಾರಿಗಳು ಪ್ರತಿ ವಾರ ಭೇಟಿ ನೀಡಿ ಪರಿಶೀಲಿಸಬೇಕು. ಸ್ಥಳೀಯ ಅಧಿಕಾರಿ ದಿನವೂ ಸ್ಥಳಕ್ಕೆ ಭೇಟಿ ನೀಡಬೇಕು. ಗುಣಮಟ್ಟದ ಕಾಮಗಾರಿಯಲ್ಲಿ ಗುತ್ತಿಗೆದಾರರ ಯಾವುದೇ ಒಪ್ಪಂದ ಇರಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಎಚ್ಚರಿಸಿದರು.

ಪ್ರವಾಹದಿಂದ ಹಾನಿಗೀಡಾದ ತಾಲೂಕಿನ ಚಿಗಳ್ಳಿ ಕೆರೆಯ 9.5 ಕೋಟಿ ರೂ. ಯೋಜನೆಯ ಪುನರುಜ್ಜೀವನ ಕಾಮಗಾರಿ ಶಿಲಾನ್ಯಾಸವನ್ನು ಶನಿವಾರ ನೆರವೇರಿಸಿ ಅವರು ಮಾತನಾಡಿದರು.

ಮನುಷ್ಯನ ಗುಣ, ಕೆಲಸದ ಗುಣಮಟ್ಟ, ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಇವೆಲ್ಲ ನನ್ನನ್ನು ಸೇರಿ ಎಲ್ಲರಲ್ಲಿ ದೂರವಾಗುತ್ತಿದೆ. ಡ್ಯಾಮಿನ ಒಡ್ಡನ್ನು ಬೇಕಂತಲೇ ರಾತ್ರಿ ಒಡೆದಿದ್ದಾರೆ ಎಂಬ ಮಾತು ಕೆಲವರ ಬಾಯಿಂದ ಕೇಳಿ ಬಂತು. ಇದು ಮಕ್ಕಳನ್ನು ಕೊಲೆ ಮಾಡುವುದಕ್ಕಿಂತ ಹೆಚ್ಚು ಪಾಪದ ಕೆಲಸ. ಮುಂದೇನಾದರೂ ಆ ರೀತಿ ಮಾಡಿದ್ದರ ಬಗ್ಗೆ ಸಂಶಯ ಬಂದರೆ ಅಂಥವರನ್ನು ನಿರ್ದಾಕ್ಷಿಣ್ಯವಾಗಿ ಪೊಲೀಸರಿಗೆ ಒಪ್ಪಿಸಲಾಗುವುದು. ನಂತರ ಸರಿಯೋ ತಪ್ಪೋ ವಿಚಾರಣೆ ನಡೆಸಲಾಗುವುದು. ಹೊಸ ತಂತ್ರಜ್ಞಾನ ಅಳವಡಿಸಿ ಕೆರೆ ಕಾಮಗಾರಿ ನಡೆಸಲಾಗುತ್ತಿದೆ. ದಿ.ರಾಮಕೃಷ್ಣ ಹೆಗಡೆ ಅವರ ದೂರದೃಷ್ಟಿಯಿಂದ ತಾಲೂಕಿನಲ್ಲಿ ಜಲಾಶಯಗಳು ನಿರ್ವಣವಾಗಿದ್ದು, ಅವರನ್ನು ಸ್ಮರಿಸಬೇಕು ಎಂದರು.

ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಪಂ ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿದರು. ಜಿಪಂ ಸದಸ್ಯ ರವಿಗೌಡ ಪಾಟೀಲ, ತಾಪಂ ಅಧ್ಯಕ್ಷೆ ರಾಧಾ ಶಿಂಗನಳ್ಳಿ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net