

ಮದ್ದೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಡೆಯುತ್ತಿರುವ ಕಾಮಗಾರಿಗಳನ್ನು ಸಂಬಂಧಿಸಿದ ಗುತ್ತಿಗೆದಾರರು ಗುಣಮಟ್ಟದಿಂದ ಮಾಡಬೇಕು, ಇಲ್ಲದಿದ್ದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಎಚ್ಚರಿಕೆ ನೀಡಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ 1ನೇ ವಾರ್ಡ್‌ನಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಶನಿವಾರ ವೀಕ್ಷಣೆ ಮಾಡಿ ಮಾತನಾಡಿದರು.
ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಹಾಗೂ ನಿಗದಿತ ಅವಧಿಯೊಳಗೆ ನಿಬಂಧನೆಗೆ ತಕ್ಕಂತೆ ಮುಗಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಸಾರ್ವಜನಿಕರು ಕಾಮಗಾರಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಕೋಟ್ಯಂತರ ರೂ. ಅನುದಾನ ತಂದು ರಸ್ತೆ, ಚರಂಡಿ, ನೀರಾವರಿ, ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ವಿವಿಧ ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಪ್ರತಿಯೊಂದು ಕಾಮಗಾರಿಯನ್ನು ನಾನು ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಆದ್ದರಿಂದ ಗುತ್ತಿಗೆದಾರರು ಜವಾಬ್ದಾರಿಯುತವಾಗಿ ಕಾಮಗಾರಿಗಳನ್ನು ಮಾಡಬೇಕು. ಒಂದು ವೇಳೆ ಕಳಪೆ ಗುಣಮಟ್ಟದ ಕಾಮಗಾರಿ ಎಂದು ಕಂಡುಬಂದರೆ ಅಂತಹ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುರಸಭಾ ಸದಸ್ಯ ಎಂ.ಬಿ.ಸಚಿನ್ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ಶಾಸಕರಾದ ಎರಡೇ ವರ್ಷದಲ್ಲಿ ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಒಳಗಾಗಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಕೆಮ್ಮಣ್ಣುನಾಲೆಯ ಸಮಗ್ರ ಅಭಿವೃದ್ಧಿಗೆ 90 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಭೂಮಿಪೂಜೆ ಮಾಡಿದ್ದಾರೆ. ಪುರಸಭೆಯನ್ನು ನಗರ ಸಭೆಯನ್ನಾಗಿಸಲು ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ.ಇಷ್ಟೆ ಅಲ್ಲದೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ 1 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ತಂದು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು, ಮುಖಂಡರಾದ ಯತೀಶ್, ಶರತ್, ಶಿವು, ವಿಜಯ್‌ಕುಮಾರ್ ಇದ್ದರು.