

ಶಿಗ್ಗಾಂವಿ: ಮಳೆಯಿಂದ ಹಾನಿಗೊಳಗಾದ ಮನೆಗಳ ಪರಿಶೀಲನೆ ವೇಳೆ ಇಲಾಖೆ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮನೆಗಳ ಸರ್ವೆಗೆ ಆಗಮಿಸಿದ್ದ ಅಧಿಕಾರಿಗಳಿಗೆ ಘೕರಾವ್ ಹಾಕಿದ ಘಟನೆ ತಾಲೂಕಿನ ಗುಡ್ಡದ ಚನ್ನಾಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೊಳಗಾದ ಮನೆಗಳ ಪರಿಶೀಲನೆ ಮಾಡಿ ನಿಖರ ಹಾನಿಯ ಪ್ರಮಾಣ ಒದಗಿಸುವಂತೆ ಸರ್ಕಾರ ಆಯಾ ಗ್ರಾ.ಪಂ.ಗಳಿಗೆ ಆದೇಶ ಮಾಡಿದೆ. ಅದರಂತೆ ಸರ್ವೆ ನಡೆಸಿರುವ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಅರ್ಹ ಫಲಾನುಭವಿಗಳನ್ನು ಪರಿಹಾರಕ್ಕೆ ಆಯ್ಕೆ ಮಾಡಿಲ್ಲ. ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿಯೂ ಇದೇ ರೀತಿ ಮಾಡಿದ್ದಾರೆ. ಯಾರಿಗೆ ಮನೆ ಮಂಜೂರಾತಿ ಮಾಡಬೇಕಾಗಿತ್ತೋ ಅವರನ್ನು (ಸಿ.ಕೆಟಗೆರಿ) 10 ಸಾವಿರ ರೂ. ಪರಿಹಾರ ಗುಂಪಿಗೆ ಸೇರಿಸಿ ಅನರ್ಹ ಫಲಾನುಭವಿಗಳನ್ನು ಮತ್ತು ಆರ್ಥಿಕವಾಗಿ ಸ್ಥಿತಿವಂತರನ್ನು (ಎ ಮತ್ತು ಬಿ) 5 ಲಕ್ಷ ರೂ. ಪರಿಹಾರದ ಗುಂಪಿಗೆ ಸೇರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ವರ್ಷ ಇದಕ್ಕೆ ಅವಕಾಶ ನೀಡುವುದಿಲ್ಲ. ಖುದ್ದಾಗಿ ತಹಸೀಲ್ದಾರ್ ಬಂದು ಸರ್ವೆ ಕಾರ್ಯ ನಡೆಸಬೇಕು. ಕಳೆದ ಬಾರಿ ಪರಿಹಾರದಿಂದ ವಂಚಿತರಾದ ಗ್ರಾ.ಪಂ. ವ್ಯಾಪ್ತಿಯ 32 ಮನೆಗಳನ್ನು ಈ ಬಾರಿ ಪರಿಹಾರಕ್ಕೆ ಪರಿಗಣಿಸಬೇಕು ಎಂದು ಗ್ರಾಮಸ್ಥರಾದ ಅಶೋಕ ಮಾವೂರ, ರಾಜು ಪಾಟೀಲ, ಫಕೀರಗೌಡ್ರ ಮರಿಗೌಡ್ರ, ಪುಟ್ಟಯ್ಯ ಬಾಳೂರ, ಮಂಜು ಬಾಡದ, ನಿಂಗಪ್ಪ ಸಣ್ಣಕ್ಕಿ, ಬಸವರಾಜ ದೊಡಮನಿ, ಯಲ್ಲಪ್ಪ ಆಡೂರ, ಯಲ್ಲಪ್ಪ ಮಾವೂರ ಆಗ್ರಹಿಸಿದರು.
ತಾ.ಪಂ. ಸದಸ್ಯ ವಿಶ್ವನಾಥ ಹರವಿ, ಗ್ರಾಮಲೆಕ್ಕಾಧಿಕಾರಿ ಮಂಜು ಮುಳಗುಂದ, ಪಿಡಿಒ ಇಮ್ತಿಯಾಜ್ ಮುಲ್ಲಾ, ಶಣ್ಮುಖ ಕಾಳಣ್ಣವರ ಮತ್ತಿತರರು ಇದ್ದರು.
ಗುಡ್ಡದ ಚನ್ನಾಪುರ ಗ್ರಾಮದಲ್ಲಿ ಕಳೆದ ಬಾರಿ ನೆರೆ ಹಾನಿಗೊಳಗಾದ 32 ಅರ್ಹ ಫಲಾನುಭವಿಗಳು ಅಧಿಕಾರಿಗಳ ತಾರತಮ್ಯ ನೀತಿಯಿಂದ ಪರಿಹಾರದಿಂದ ವಂಚಿತರಾಗಿದ್ದಾರೆ. ಮನೆ ಇಲ್ಲದೆ ದನದ ಕೊಟ್ಟಿಗೆ, ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಇಂಥ ಕುಟುಂಬಗಳನ್ನು ಈ ಸಲ ಮರು ಸರ್ವೆ ಮಾಡಿ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು. | ಷಣ್ಮುಖ ಕಾಳಣ್ಣವರ, ಗ್ರಾ.ಪಂ. ಮಾಜಿ ಅಧ್ಯಕ್ಷ, ಗುಡ್ಡದ ಚನ್ನಾಪುರ
ಮಳೆಯಿಂದ ಹಾನಿಗೊಳಗಾದ ಮನೆಗಳ ಸರ್ವೆ ಕಾರ್ಯಕ್ಕೆ ಗ್ರಾಮಸ್ಥರು ತಕರಾರು ಮಾಡಿದ್ದರಿಂದ ತಹಸೀಲ್ದಾರ್ ಗಮನಕ್ಕೆ ತಂದು ಅವರ ಸಮ್ಮುಖದಲ್ಲಿ ಸರ್ವೆ ಕಾರ್ಯ ಮಾಡಲಾಗುವುದು. | ಇಮ್ತಿಯಾಜ್ ಮುಲ್ಲಾ, ಪಿಡಿಒ