ಗುಡಿಗಾರರ ಮನೆಗಳಲ್ಲಿ ಕೆಲಸ ಜೋರು

4SIRSI3
Published on

ಶಿರಸಿ: ಕೋವಿಡ್ ಕಾಲ ಘಟ್ಟದಲ್ಲೂ ತಾಲೂಕಿನೆಲ್ಲೆಡೆ ಗುಡಿಗಾರರ ಮನೆಗಳಲ್ಲಿ ಈಗ ಬಿಡುವಿಲ್ಲದ ಕೆಲಸ ಆರಂಭವಾಗಿದೆ. ಸುಂದರವಾದ ಗಣಪತಿ ಮೂರ್ತಿಯನ್ನು ಸಿದ್ಧಪಡಿಸಲಾಗುತ್ತಿದೆ.

ಗಣೇಶ ಚತುರ್ಥಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಆದರೆ, ಗುಡಿಗಾರರ ಮನೆಗಳಲ್ಲಿ ಎಲ್ಲರೂ ಬ್ಯುಸಿ ಆಗಿದ್ದಾರೆ. ಆರೆಂಟು ಜನರು ಸುತ್ತುವರಿದು ಕುಳಿತು, ಮಣ್ಣಿನಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಚಿಕ್ಕ ಮೂರ್ತಿಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ. ಆದರೆ, ಸಾರ್ವಜನಿಕವಾಗಿ ಸ್ಥಾಪಿಸುವ ಬೃಹತ್ ಮೂರ್ತಿಗಳನ್ನು ಮಾತ್ರ ಕೇಳುವವರೇ ಇಲ್ಲವಾಗಿದೆ.

ನಗರದಲ್ಲಿ 15ಕ್ಕೂ ಹೆಚ್ಚು ಕಡೆಗಳಲ್ಲಿ ಗಣಪತಿ ವಿಗ್ರಹಗಳು ತಯಾರಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಗುಡಿಗಾರರ ಜೊತೆಗೆ ಹವ್ಯಾಸಿ ಕಲಾವಿದರು ಮಣ್ಣಿನಲ್ಲಿ ಗಣೇಶನನ್ನು ಅರಳಿಸುತ್ತಾರೆ. ಈ ಬಾರಿ ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ಸಾರ್ವಜನಿಕ ಗಣೇಶೋತ್ಸವಗಳು ಸರಳವಾಗಿ ನಡೆಯುತ್ತವೆ. ಆದರೆ, ಮನೆಗಳಲ್ಲಿ ಹಬ್ಬದ ಆಚರಣೆಗೆ ಇದು ಅಡ್ಡಿಯಾಗಲಾರದು. ಹೀಗಾಗಿ, ಚಿಕ್ಕ ಮೂರ್ತಿಗಳ ರಚನೆ ಹೆಚ್ಚಿದೆ. ಒಂದೂವರೆ ತಿಂಗಳಿಂದ ಮೂರ್ತಿ ತಯಾರಿಕೆ ಕಾರ್ಯ ನಿರಂತರವಾಗಿ ಸಾಗಿದೆ. 250ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿದ್ದೇವೆ. ಈಗ ಮೂರ್ತಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಕೆಲಸಗಾರರು, ಮನೆಯ ಸದಸ್ಯರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಎಲ್ಲ ಗ್ರಾಹಕರು, ಪ್ರತಿ ವರ್ಷದಂತೆ ಈ ವರ್ಷವೂ ಮೂರ್ತಿಗೆ ಬೇಡಿಕೆ ಸಲ್ಲಿಸಿದ್ದಾರೆ ಎನ್ನುತ್ತಾರೆ ಚನ್ನಪಟ್ಟಣ ಬಜಾರದಲ್ಲಿರುವ ಮೋಹನ ಗುಡಿಗಾರ ಕುಟುಂಬದವರು. ಕೋವಿಡ್ 19 ಕಾರಣಕ್ಕೆ ಮೂರ್ತಿಗಳ ಬೇಡಿಕೆಯಲ್ಲಿ ವ್ಯತ್ಯಾಸವಾಗಿಲ್ಲ. ಮಧ್ಯಮ ಗಾತ್ರದ ಮೂರ್ತಿ 1000 ದಿಂದ 1300 ರೂ. ಹಾಗೂ ಚಿಕ್ಕ ಮೂರ್ತಿಗಳು 650 ರಿಂದ 800 ರೂಪಾಯಿಗಳಿಗೆ ದೊರೆಯುತ್ತಿವೆ.

ಚೌತಿ ಹಬ್ಬದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಕ್ರಮ ಅನೇಕ ಕುಟುಂಬಗಳಲ್ಲಿ ತಲತಲಾಂತರಗಳಿಂದ ನಡೆದುಕೊಂಡು ಬಂದಿದೆ. ಕಳೆದ 70-80 ವರ್ಷಗಳಿಂದ ತಪ್ಪದೇ ಗಣೇಶ ವಿಗ್ರಹ ಕೊಂಡೊಯ್ಯುವ ಗ್ರಾಹಕರಿದ್ದಾರೆ. ಅವರು ಈ ವರ್ಷ ಕೂಡ ಈಗಾಗಲೇ ಆರ್ಡರ್ ಕೊಟ್ಟಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾರ್ವಜನಿಕ ವಿಗ್ರಹಗಳನ್ನು ಹೆಚ್ಚು ತಯಾರಿಸುತ್ತಿದ್ದ ಗುಡಿಗಾರರಿಗೆ ಈ ಬಾರಿ ನಷ್ಟವಾಗಿದೆ. ತಾಲೂಕಿನಲ್ಲಿ 190ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿದ್ದರು. ಈ ಬಾರಿ ಸರಳ ಆಚರಣೆ ಇರುವುದಕ್ಕೆ ಮನೆಯಲ್ಲಿ ಸ್ಥಾಪಿಸುವ ವಿಗ್ರಹಗಳನ್ನೇ ಸಾರ್ವಜನಿಕ ಸ್ಥಳದಲ್ಲಿಯೂ ಇಟ್ಟು, ಅದೇ ದಿನ ವಿಸರ್ಜನೆ ಮಾಡುವ ಯೋಜನೆ ಬಹುತೇಕ ಗಣೇಶೋತ್ಸವ ಮಂಡಳಿಗಳದ್ದಾಗಿದೆ. ಹೀಗಾಗಿ, ಎಲ್ಲ ಗುಡಿಗಾರರ ಮನೆಗಳಲ್ಲಿ ಈ ಬಾರಿ ಸಣ್ಣ ವಿಗ್ರಹಗಳು ಮಾತ್ರ ಕಾಣಸಿಗುತ್ತವೆ. | ಮೋಹನ ಗುಡಿಗಾರ ಮೂರ್ತಿ ತಯಾರಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net