

ಶಿಡ್ಲಘಟ್ಟ : ‘ಸಿದ್ದರಾಮಯ್ಯನವರೇ ಓಲೈಕೆ ರಾಜಕಾರಣ ಬಿಡಿ, ದೇವಸ್ಥಾನದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸುವುದು ಮುಂದುವರಿದರೆ ನಮ್ಮ ರೈತರು ನಿಮ್ಮ ಸರ್ಕಾರ ಬೀಳಿಸುತ್ತಾರೆೆ ಹುಷಾರು!’ ಎಂದು ತಾಲೂಕು ಬಿಜೆಪಿ ಘಟಕ ಎಚ್ಚರಿಸಿತು.
ತಾಲೂಕಿನ ಬೆಳ್ಳೂಟಿ ಬಳಿಯ ಶ್ರೀ ಗುಟ್ಟಾಂಜನೇಯಸ್ವಾಮಿ ದೇವಾಲಯ ಜಾಗದ ಪಹಣಿಯಲ್ಲಿ ಖಬರಸ್ಥಾನ ವಕ್ಫೃ್ ಸ್ವತ್ತು ಎಂದು ದಾಖಲಾಗಿರುವುದನ್ನು ಖಂಡಿಸಿ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು.
ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ವಕ್ಫ್ ಆಟಕ್ಕೆ ಕಡಿವಾಣ ಬೀಳಲಿದೆ. ಆದರೆ ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದಿಂದ ರೈತರು ಹಾಗೂ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ರಾಜ್ಯದಲ್ಲಿ 25 ಸಾವಿರ ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಸ್ವತ್ತು ಎಂದು ದಾಖಲಾಗಿರುವುದು ಭವಿಷ್ಯದ ಕರಾಳತೆ ಸೂಚಿಸುತ್ತಿದೆ. ರೈತರ ಜಮೀನಿನ ತಂಟೆಗೆ ಬಂದಿರುವ ಡಿ.ಕೆ.ಶಿವಕುಮಾರ್ ಅವರಿಗೂ ರೈತರು ಬುದ್ಧಿ ಕಲಿಸುತ್ತಾರೆ ಎಂದು ರಾಮಚಂದ್ರಗೌಡ ಎಚ್ಚರಿಸಿದರು.
ಶ್ರೀ ಗುಟ್ಟಾಂಜನೇಯಸ್ವಾಮಿ ದೇವಾಲಯದ ಜಾಗದ ಪಹಣಿಯಲ್ಲಿ ಖಬರಸ್ಥಾನ ವಕ್ಫ್ ಸ್ವತ್ತು ಎಂದು ದಾಖಲಾಗಿರುವುದು ಕಂಡುಬಂದಿದೆ. ಅದೇ ರೀತಿಯಾಗಿ ಇನ್ನು ಯಾವಯಾವ ಸ್ವತ್ತುಗಳು, ಜಮೀನುಗಳ ಪಹಣಿಗಳಲ್ಲಿ ವಕ್ಫ್ ಸ್ವತ್ತು ಎಂದು ದಾಖಲಾಗಿದೆ ಎಂಬುದನ್ನು ಹೊರತೆಗೆಯುತ್ತೇನೆ. ಕಾನೂನು ಬಾಹಿರವಾಗಿ ನಡೆದಿರುವ ಈ ಅಕ್ರಮ ಹೊರಗೆಳೆಯುವ ನಮ್ಮ ಹೋರಾಟ ನಿಲ್ಲದು. ಸಿದ್ದರಾಮಯ್ಯ ಅವರ ಉದ್ದೇಶಗಳು ಜನರಿಗೆ ಅರ್ಥವಾಗುತ್ತಿವೆ. ಮೈಸೂರು ಪೇಟ ತಂದರೆ ಪಕ್ಕಕ್ಕೆ ತಳ್ಳುತ್ತಾರೆ, ಇನ್ನೊಂದು ಕೋಮಿನ ಟೋಪಿ ತಂದರೆ ತಲೆ ಬಾಗಿಸುತ್ತಾರೆ. ಸರ್ಕಾರವನ್ನು ಉಳಿಸಿಕೊಳ್ಳಲೆಂದು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ವಕ್ಫ್ ಬೋರ್ಡ್ ಅಧ್ಯಕ್ಷ ಜಮೀರ್ ಅಹಮದ್ ಖಾನ್ ಅವರ ನಡೆ ಖಂಡನೀಯ. ಎಲ್ಲ ಪಹಣಿ ತೆಗೆಸಿ ಅಕ್ರಮ ಜನರ ಮುಂದಿಡುತ್ತೇವೆ ಎಂದರು.
ತಹಸೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ಶಿಡ್ಲಘಟ್ಟ ತಾಲೂಕಿನಲ್ಲಿ ವಕ್ಫ್ ಸ್ವತ್ತು ಎಂದು ನಮೂದಾಗಿರುವ ಎಲ್ಲ ಪಹಣಿಗಳ ದಾಖಲೆ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಬಿ.ಎನ್.ಸ್ವಾಮಿ, 2019ರ ಪಹಣಿಯಲ್ಲಿ ಬದಲಾವಣೆ ಆಗಿದೆ. ಬೆಳ್ಳೂಟಿ ಗೇಟ್ ಬಳಿ 1 ಎಕರೆ 8 ಗುಂಟೆ ಗುಟ್ಟಾಂಜನೇಯಸ್ವಾಮಿ ದೇವಾಲಯ ಜಾಗ ಇದೆ ಎಂದು ಸರ್ವೇ ಮಾಡಿ ಉಪವಿಭಾಗಾಧಿಕಾರಿಗಳಿಗೆ ವರದಿ ನೀಡಲಾಗಿದ್ದು, ಅವರು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಆನಂದಗೌಡ, ನಿಕಟ ಪೂರ್ವ ಅಧ್ಯಕ್ಷ ಸುರೇಂದ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಕನಕಪ್ರಸಾದ್, ನರೇಶ್, ನರ್ಮದಾರೆಡ್ಡಿ, ಚಾತುರ್ಯ, ತ್ರಿವೇಣಿ, ಸೋಮಣ್ಣ, ಬಾಗೇಪಲ್ಲಿ ವೆಂಕಟೇಶ್, ಗುಡಿಬಂಡೆ ನಾಗಭೂಷಣ್ ರೆಡ್ಡಿ, ನಾಗೇಶ್, ಮೋಹನ್, ಗಣೇಶ್ ರೆಡ್ಡಿ, ಮಂಜುಕಿರಣ್, ಡಾ.ಸತ್ಯನಾರಾಯಣರಾವ್, ರೈತರಾದ ಎಚ್.ಜಿ.ಗೋಪಾಲಗೌಡ, ಎಚ್.ಕೆ.ಸುರೇಶ್, ಔಷಧ ವ್ಯಾಪಾರಿಗಳ ಸಂಘದ ಸದಸ್ಯರು ಇದ್ದರು.