

ನಾಪೋಕ್ಲು: ಚೇರಿಯಪರಂಬು ಗ್ರಾಮದಲ್ಲಿ ಹದಗೆಟ್ಟ ರಸ್ತೆಯ ಗುಂಡಿಮುಚ್ಚಿ ವಾಹನ ಚಾಲಕರಿಗೆ ನೆರವಾಗುವ ಕೆಲಸವನ್ನು ಸ್ಥಳೀಯ ಶೌರ್ಯ ತಂಡದ ಸದಸ್ಯರು ಶನಿವಾರ ಮಾಡಿದರು.
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಚೇರಿಯಪರಂಬು ಊರಿನ ಜನರೆಲ್ಲರೂ ಉಪಯೋಗಿಸುವ ರಸ್ತೆಯ ದುಸ್ಥಿತಿಯನ್ನು ಸಂಬಂಧಪಟ್ಟವರು ಗಮನಹರಿಸದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ದುಸ್ತರವಾಗಿತ್ತು. ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವುದನ್ನು ಗಮನಿಸಿದ ಶೌರ್ಯ ಸದಸ್ಯರು ಹೊಳೆಯಿಂದ ಕಲ್ಲುಗಳನ್ನು ಶೇಖರಿಸಿ ಪಿಕಪ್ ವಾಹನದಲ್ಲಿ ತಂದು ರಸ್ತೆ ಗುಂಡಿಯನ್ನು ಮುಚ್ಚಿದರು. ಶೌರ್ಯ ಸದಸ್ಯರು ಊರಿನವರ ಪ್ರಶಂಸೆಗೆ ಭಾಜನರಾದರು. ಈ ಸೇವಾ ಕಾರ್ಯದಲ್ಲಿ ದಿಲೀಶ್, ಶಂಕರ್ ಬಿ.ಎಚ್, ಸೀನಾ ಮಾಧವನ್, ಮಾಯಿಲಪ್ಪ ಪಿ.ಎಂ, ಗಣೇಶ್ ಎಂ., ಅಪ್ಪಣ್ಣ, ಪ್ರವೀಣ ಹಾಜರಿದ್ದರು.