

ಹನೂರು: ತಾಲೂಕಿನ ತಾಳು ಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯು ಇತ್ತೀಚೆಗೆ ಸುರಿದ ಮಳೆಯಿಂದಾಗಿ ತೀರಾ ಹದಗೆಟ್ಟಿದೆ. ಗುಂಡಿಗಳಲ್ಲಿ ನೀರು ನಿಲ್ಲುವಂತಾಗಿದ್ದು ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ರಸ್ತೆ ಅಭಿವೃದ್ಧಿಪಡಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರು ಒತ್ತಾಯಿಸಿದ್ದಾರೆ.
ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಹದೇಶ್ವರ ಬೆಟ್ಟಕ್ಕೆ ಪ್ರತಿದಿನ ಸುಮಾರು 10 ರಿಂದ 15 ಸಾವಿರ, ಸರ್ಕಾರಿ ರಜೆ, ವಾರಾಂತ್ಯದ ದಿನಗಳಲ್ಲಿ 30 ಸಾವಿರ ಜನ, ಎಣ್ಣೆಮಜ್ಜನೆ ಸೇವೆ, ಅಮಾವಾಸ್ಯೆಯಂದು 40 ಸಾವಿರಕ್ಕೂ ಹೆಚ್ಚು ಹಾಗೂ ಯುಗಾದಿ, ದೀಪಾವಳಿ, ಮಹಾಶಿವರಾತ್ರಿ ಹಾಗೂ ಇನ್ನಿತರ ಜಾತ್ರಾ ಸಂದರ್ಭದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ಆದರೆ, ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ತೀವ್ರ ಹಾಳಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ವಾಹನಗಳ ಸಂಚಾರವೂ ದ್ವಿಗುಣಗೊಂಡಿದೆ.
ಈ ಮಾರ್ಗದ ರಸ್ತೆ ನಿರ್ಮಾಣವಾದಾಗಿನಿಂದಲೂ ವಿಸ್ತರಣೆಯಾಗಿಲ್ಲ್ಲ. ಇದರಿಂದ ಕೆಲವು ತಿರುವುಗಳಲ್ಲಿ ವಾಹನ ಸವಾರರು ಆತಂಕದಿಂದಲೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಂಗಸ್ವಾಮಿ ಒಡ್ಡು ಹಾಗೂ ಆನೆತಲೆ ದಿಂಬದಿಂದ ಆಣೆಹೊಲದ ತನಕ ಇಕ್ಕಟ್ಟಾದ ರಸ್ತೆಯಿಂದ ಜಾತ್ರೆ ಹಾಗೂ ಇನ್ನಿತರ ವಿಶೇಷ ದಿನಗಳಂದು ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ನಿರ್ಮಾಣವಾಗುತ್ತಲೇ ಇದೆ. ಇದರಿಂದ ವಾಹನ ಸವಾರರು ಪರದಾಡುವಂತಾದರೆ, ಭಕ್ತರು ಕಿರಿಕಿರಿ ಅನುಭವಿಸುವಂತಾಗಿದೆ.
ಹದಗೆಟ್ಟ ರಸ್ತೆಯಿಂದಾಗಿ ರಾತ್ರಿ ವೇಳೆ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇದೆ. ಇತ್ತ ಕಾರುಗಳು, ಮಿನಿ ಬಸ್‌ಗಳು ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತವಾಗಿರುವ ಘಟನೆಯೂ ನಡೆದಿದೆ. ಇದೀಗ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುವಂತಾಗಿದೆ. ಲಕ್ಷಾಂತರ ಭಕ್ತರು ಸಂಚರಿಸುವ ಈ ರಸ್ತೆಯನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ಹೆಚ್ಚಿನ ಕಾಳಜಿ ವಹಿಸದಿರುವುದೇ ಭಕ್ತರ ಬೇಸರಕ್ಕೆ ಕಾರಣವಾಗಿದೆ.
ಇನ್ನು ಮ.ಬೆಟ್ಟದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗುತ್ತಿದ್ದಂತೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಾಗುತ್ತಿದೆ. ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯವನ್ನು ಒದಗಿಸಲಾಗುತ್ತಿದೆ. ಆದರೆ ಪಿಡಬ್ಲ್ಯುಡಿ ಇಲಾಖೆ ರಸ್ತೆಯನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಪರಿಣಾಮ ಭಕ್ತರು ಕಷ್ಟಪಡುವಂತಾಗಿದೆ. ಗುಂಡಿ ಬಿದ್ದ ರಸ್ತೆಯನ್ನು ಮಾದಪ್ಪನೇ ಕಾಪಾಡಬೇಕು ಎಂಬುದಾಗಿ ಭಕ್ತರು ಶ್ರೀ ಮಲೆಮಹದೇಶ್ವರ ಸ್ವಾಮಿ ದಕ್ಷಿಣ ದ್ವಾರ ಹನೂರು ಕ್ಷೇತ್ರ ಫೇಸ್‌ಬುಕ್ ಖಾತೆ ಹೆಸರಲ್ಲಿ ವ್ಯಕ್ತಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಇನ್ನು ಮುಂದಾದರೂ ಇತ್ತ ಗಮನಹರಿಸಿ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸುವುದರ ಮೂಲಕ ಅನುಕೂಲ ಕಲ್ಪಿಸಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.