

ಸೋಮವಾರಪೇಟೆ: ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಂಜನೇಯ ದೇವಾಲಯದಿಂದ ಒಎಲ್‌ವಿ ಕಾನ್ವೆಂಟ್ ರಸ್ತೆ ಗುಂಡಿಮಯವಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ. ಹಲವು ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏರಿಳಿತದ ರಸ್ತೆಯಾಗಿದ್ದು ಮಧ್ಯದಲ್ಲಿ ಮಾತ್ರ ರಸ್ತೆ ಸಮತಟ್ಟಾಗಿದ್ದು, ಗುಂಡಿಗಳಿಂದ ಕೂಡಿದೆ. ಮಳೆಗಾಲದಲ್ಲಿ ಹೊಂಡಮಯವಾಗುವುದರಿಂದ ವಿದ್ಯಾರ್ಥಿಗಳು ನಡೆದಾಡಲು ಕಷ್ಟಪಡಬೇಕಾಗಿದೆ, ಶಾಲಾ ವಾಹನಗಳಿಗೂ ಸಮಸ್ಯೆಯಾಗಿದೆ.
ರಸ್ತೆ ಸರಿಪಡಿಸಲು ಹಲವು ಭಾರಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರಾದ ಮೋಹನ್, ಮುರಳೀಧರ್, ಕುಶಾಲಪ್ಪ ಆರೋಪಿಸಿದ್ದಾರೆ.
ಆಡಳಿತ ಪಕ್ಷದ ಪ್ರಮುಖರೂ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಆದರೂ ರಸ್ತೆ ದುರಸ್ತಿ ಆಗಿಲ್ಲ ಎಂದು ದೂರಿದ್ದಾರೆ. ಕೂಡಲೇ ರಸ್ತೆ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.