ಗುಂಡಿ ನಿರ್ವಣ, ರೈತರಿಗೆ ವರದಾನ

22-RNR-01
Published on

ರಾಣೆಬೆನ್ನೂರ: ತಾಲೂಕಿನ ತುಂಗಭದ್ರಾ ನದಿಪಾತ್ರದ ಜಮೀನುಗಳನ್ನು ಹೊರತು ಪಡಿಸಿ ಇನ್ನುಳಿದ ಬಹುಪಾಲು ಜಮೀನುಗಳಲ್ಲಿ ಇದೀಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬದು ಕಂದಕ (ಗುಂಡಿ) ನಿರ್ಮಾಣ ಮಾಡಲಾಗುತ್ತಿದ್ದು, ರೈತರಿಗೆ ವರದಾನವಾಗಿದೆ.

ತಾಪಂ ಹಾಗೂ ಆಯಾ ಗ್ರಾಪಂ ವತಿಯಿಂದ ಕೈಗೊಳ್ಳುವ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಕೂಲಿ ಕಲ್ಪಿಸಲಾಗುತ್ತಿದ್ದು, ಬದು ನಿರ್ಮಾಣ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬರಗಾಲ ಹಾಗೂ ಕಳೆದ ವರ್ಷ ಅತಿವೃಷ್ಟಿ ಎದುರಾದ ಕಾರಣ ರೈತರು ಬದು ನಿರ್ವಿುಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ರೈತರು ವೈಯಕ್ತಿಕವಾಗಿ ಕಾಮಗಾರಿ ಕೈಗೊಂಡರೂ ಕೂಲಿ ಹಣ ನೀಡಲು ಸಂಕಷ್ಟ ಎದುರಿಸಬೇಕಿತ್ತು. ಆದರೀಗ ನರೇಗಾದಡಿ ಕಾಮಗಾರಿ ಮಾಡುತ್ತಿರುವುದು ರೈತರಿಗೆ ಅನುಕೂಲವಾಗಿದೆ.

ಏನಿದು ಬದು ನಿರ್ವಣ...? : ಜಮೀನಿನ ಕೊನೆಯಲ್ಲಿ ಮಳೆ ನೀರು ಇಂಗುವಂತೆ ಗುಂಡಿ ತೆಗೆಯುವುದು. ಗುಂಡಿ ತೆಗೆದ ಮಣ್ಣನ್ನು ಹೊಲದ ಬದುವನ್ನಾಗಿ ನಿರ್ವಿುಸಲಾಗುತ್ತದೆ. ರೈತರ ಜಮೀನಿನ ಇಳಿಜಾರು ಪ್ರದೇಶದಲ್ಲಿ 2 ಅಡಿ ಆಳ, 5 ಮೀಟರ್ ಉದ್ದ ಹಾಗೂ 2 ಮೀಟರ್ ಅಗಲ ಗುಂಡಿಗಳನ್ನು ಸಾಲಾಗಿ ತೆಗೆಯಲಾಗುತ್ತದೆ.

ಮಳೆಗಾಲದಲ್ಲಿ ನೀರು ಪೋಲಾಗದಂತೆ ತಡೆಯಲಾಗುತ್ತದೆ. ಒಂದು ಕಂದಕದಲ್ಲಿ ನೀರು ಜಮೀನಿನಲ್ಲೇ ಇಂಗುವಂತೆ ಮಾಡಲಾಗುತ್ತದೆ. ಇಂಗಿದ ನೀರು ಜಮೀನಿನಲ್ಲಿನ ತೇವಾಂಶ ಹೆಚ್ಚಿಸುತ್ತದೆ. ಫಸಲಿಗೂ ಅನುಕೂಲ, ಜತೆಗೆ ಜಮೀನಿನಲ್ಲಿನ ಕೊಳವೆ ಬಾವಿಗಳಿಗೆ ಅಂತರ್ಜಲ ಮಟ್ಟ ಹೆಚ್ಚಿಸುತ್ತದೆ. ಮುಖ್ಯವಾಗಿ ಜಮೀನಿನಲ್ಲಿನ ಮಣ್ಣಿನ ಸವಕಳಿ ತಡೆಯುತ್ತದೆ. ಸಹಜವಾಗಿಯೇ ಇದು ರೈತರಿಗೆ ಪೂರಕವಾಗಿರುವುದರಿಂದ ಯೋಜನೆ ಮಹತ್ವ ಪಡೆದುಕೊಂಡಿದೆ.

ಎಷ್ಟು ಕೆಲಸ...?: ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಈಗಾಗಲೇ 2368 ರೈತರ ಒಟ್ಟು 2710 ಹೆಕ್ಟೇರ್ ಜಮೀನಿನಲ್ಲಿ ಬದು ಕಂದಕ ನಿರ್ವಿುಸಲಾಗಿದೆ. ತಾಲೂಕಿನಲ್ಲಿ ಒಟ್ಟು 3266 ಕೂಲಿ ಕಾರ್ವಿುಕರು ಕೆಲಸ ಮಾಡುತ್ತಿದ್ದು, ಬದು ನಿರ್ಮಾಣ ಕಾಮಗಾರಿಯಲ್ಲಿ 22 ಸಾವಿರ ಮಾನವ ದಿನಗಳಾಗಿವೆ. ಪ್ರತಿ ದಿನಕ್ಕೆ 275 ರೂ.ದಂತೆ ಈಗಾಗಲೇ ಸಂಬಳ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ತಾಲೂಕಿನ ಪ್ರಗತಿಗೆ ಹೋಲಿಸಿದಾಗ ರಾಣೆಬೆನ್ನೂರ ತಾಲೂಕು ಮೊದಲ ಸ್ಥಾನದಲ್ಲಿದೆ. ಸದ್ಯ ಕಾಮಗಾರಿ ನಡೆಯುತ್ತಿದ್ದು, ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಾಗ ಮಾತ್ರ ಕಾಮಗಾರಿ ಸ್ವಲ್ಪ ಮುಂದಕ್ಕೆ ಹಾಕಲಾಗುತ್ತಿದೆ. ಇನ್ನುಳಿದಂತೆ ನಿತ್ಯವೂ ಕಾಮಗಾರಿ ನಡೆಯುತ್ತಿದೆ ಎಂದು ತಾಪಂ ಇಒ ಎಸ್.ಎಂ. ಕಾಂಬಳೆ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಜಮೀನುಗಳಲ್ಲಿ ಬದು ಕಂದಕ ನಿರ್ಮಾಣ ಮಾಡುತ್ತಿರುವುದರಿಂದ ಮಳೆ ನೀರು ನಿಂತುಕೊಳ್ಳಲು ಅನುಕೂಲವಾಗಿದೆ. ಈ ಹಿಂದೆ ಜಮೀನಿನ ಮಣ್ಣು ಸಹ ಕೊಚ್ಚಿಕೊಂಡು ಹೋಗುತ್ತಿತ್ತು. ಇದೀಗ ಸಂಪೂರ್ಣ ಜಮೀನು ಮಳೆಯಿಂದ ಹಸಿಯಾಗಿದೆ. | ಮಂಜಪ್ಪ ಎಸ್., ಮೈದೂರು ರೈತ

ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಮಳೆಗಾಲದಲ್ಲಿ ಆಗುವ ಅನುಕೂಲಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗಿದೆ. ರೈತರು ಉತ್ಸಾಹದಿಂದ ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಮಳೆ ಪೂರ್ಣ ಪ್ರಮಾಣದಲ್ಲಿ ಸುರಿಯುವವರೆಗೂ ಕಾಮಗಾರಿ ಮಾಡಲಾಗುವುದು. | ಎಸ್.ಎಂ. ಕಾಂಬಳೆ, ತಾಪಂ ಇಒ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net