ಗಾಯಗೊಂಡಿದ್ದ ಒಂಟಿ ಸಲಗಕ್ಕೆ ಚಿಕಿತ್ಸೆ

IMG-20230825-WA0263
ಗಾಯಗೊಂಡಿರುವ ಆನೆ
Published on

ಸಕಲೇಶಪುರ: ತಾಲೂಕಿನ ಹೆಗ್ಗೂವೆ ಗ್ರಾಮದ ಹೊರವಲಯದಲ್ಲಿ ಕಾಡಾನೆಗಳ ಕಾಳಗದಲ್ಲಿ ಗಾಯಗೊಂಡು ನರಳುತ್ತಿದ್ದ ಒಂಟಿ ಸಲಗಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡಿದರು.

ಕಳೆದ ಕೆಲವು ದಿನಗಳಿಂದ ಸಂಚರಿಸಲು ಸಾಧ್ಯವಾಗದೆ ಗ್ರಾಮದ ಹೊಂಡದಲ್ಲಿ ಮಲಗುತ್ತಿದ್ದ ಕಾಡಾನೆಯ ಸ್ಥಿತಿಯ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ವನ್ಯಜೀವಿ ತಜ್ಞರನ್ನು ಕರೆಸಿಕೊಂಡು ಚಿಕಿತ್ಸೆಗೆ ಪ್ರಯತ್ನಿಸಲಾಯಿತು. ಅರಿವಳಿಕೆ ಚುಚ್ಚುಮದ್ದನ್ನು ಮೂರು ಬಾರಿ ನೀಡಿದರು. ನೆಲಕ್ಕೊರಗದ ಕಾಡಾನೆಯು ಮಂಕಾಗಿ ನಿಂತಿದ್ದ ವೇಳೆ ಹಿಂಬದಿಯಿಂದ ಚಿಕಿತ್ಸೆ ನೀಡಲಾಯಿತು. ಮತ್ತೊಂದು ಆನೆಯು ಕೋರೆಯಿಂದ ತಿವಿದಿರುವ ಪರಿಣಾಮ ಹೊಟ್ಟೆಭಾಗದಲ್ಲಿ ತೀವ್ರ ಗಾಯವಾಗಿ ಆಹಾರ ತ್ಯಜಿಸಿತ್ತು. ಪಾದದ ಉಂಗುಷ್ಟದಲ್ಲಿ ಗಾಯವಾಗಿ ಕೀವು ತುಂಬಿದ್ದರಿಂದ ಸಂಚರಿಸಲು ಸಾಧ್ಯವಾಗದೆ ನರಳುತ್ತಿತ್ತು. ಸದ್ಯ ಜೀವಪ್ರತಿರೋಧಕ ಚುಚ್ಚುಮದ್ದು ನೀಡಲಾಗಿದ್ದು, ಮತ್ತೊಮ್ಮೆ ಚಿಕಿತ್ಸೆ ನೀಡಲು 72 ಗಂಟೆ ಸಮಯಾವಕಾಶ ಬೇಕಿದೆ ಎಂದು ವೈದ್ಯ ಮುಜಿಬರ್ ರೆಹಮಾನ್ ಹೇಳಿದ್ದಾರೆ.

ಗಾಯಗೊಂಡಿರುವ ಕಾಡಾನೆಗೆ ಅದರ ಗಾತ್ರ ಗಮನಿಸಿ ಅರಣ್ಯ ಇಲಾಖೆ ಭೀಮ ಎಂದು ಹೆಸರಿಡಲಾಗಿದ್ದು, ಗ್ರಾಮದೊಳಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆ ನಿರುಪದ್ರವಿ ಎಂಬುದು ಚಿಕಿತ್ಸೆ ವೀಕ್ಷಣೆಗೆ ಬಂದಿದ್ದ ಗ್ರಾಮಸ್ಥರ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net