

ಬಾಗಲಕೋಟೆ: ಅಹಿಂಸೆ ಎಂಬ ಅಸ್ತ್ರವನ್ನು ಬಳಸಿ ಭಾರತವನ್ನು ಬ್ರಿಟೀಷರಿಂದ ಬಂಧಮುಕ್ತಗೊಳಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೋರಾಟ ಇಡೀ ಜಗತ್ತಿಗೆ ಮಾದರಿ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು ಅಹಿಂಸೆಯಲ್ಲಿ ಎಂತಹ ಶಕ್ತಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂಥ ಹೆಗ್ಗಳಿಕೆ, ಅಭಿಮಾನ, ಹೆಮ್ಮೆ ನಮ್ಮದು. ಇದಕ್ಕೆಲ್ಲ ಕಾರಣರಾದ ನಮ್ಮ ಪೂರ್ವಜರನ್ನು ಗೌರವದಿಂದ ಸ್ಮರಿಸುವ ದಿನ ಇದಾಗಿದೆ ಎಂದರು.
ನಮ್ಮ ಸರಕಾರ ನುಡಿದಂತೆ ನಡೆಯುವ ಸರ್ಕಾರ ಎಂಬ ಸಂದೇಶವನ್ನು ಜನತೆಗೆ ನೀಡಿದೆ. ದೇಶದಲ್ಲಿಯೇ ಪ್ರಪ್ರಥಮವಾಗಿ ವಿನೂತನ ಮಾದರಿಯಲ್ಲಿ ಸರ್ವಜನರ ಏಳಿಗೆಗಾಗಿ ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಭರವಸೆ ನೀಡಲಾಗಿದ್ದ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳಿಗೆ ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಗೃಹಜ್ಯೋತಿ ಯೋಜನೆಗಳು ಜಾರಿಯಾಗಿವೆ. ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಶಕ್ತಿ ಯೋಜನೆಗೆ ಆಗಸ್ಟ 11ಕ್ಕೆ ಎರಡು ತಿಂಗಳು ಪೂರೈಸಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 1.76 ಲಕ್ಷ ಇದ್ದು, ಒಟ್ಟು ಪ್ರಯಾಣಿಕರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.57 ರಷ್ಟು ಇದ್ದು, ಒಟ್ಟು ಆದಾಯದಲ್ಲಿ ಶಕ್ತಿ ಯೋಜನೆಯ ಪಾಲು ಶೇ.54 ರಷ್ಟು ಇದೆ. ರಾಜ್ಯ ಗೃಹ ವಿದ್ಯುತ್ ಬಳಕೆದಾರರಿಗೆ ಗರಿಷ್ಟ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 4,28,268 ಗೃಹ ಬಳಕೆಯ ಸಂಪರ್ಕಗಳ ಪೈಕಿ 3,57,119 ಜನ ನೊಂದಾಯಿಸಿದ್ದು, ಶೇ.83.39 ರಷ್ಟು ವಿದ್ಯುತ್ ಗ್ರಾಹಕರು 10.55 ಕೋಟಿ ರೂ.ಗಳ ಆರ್ಥಿಕ ಪ್ರಯೋಜನ ಪಡೆದುಕೊಂಡಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ಫಲಾನುಭವಿಗಳಿಗೆ 170ರೂ.ಗಳಂತೆ ಈಗಾಗಲೇ ಜಿಲ್ಲೆಯಲ್ಲಿರುವ ಅಂತ್ಯೋದಯ, ಬಿಪಿಎಲ್ ಸೇರಿ ಒಟ್ಟು 4,18,515 ಪಡಿತರ ಚೀಟಿಗ¼ ಪೈಕಿ ಎನ್.ಐ.ಸಿ ಇಂದ ಸ್ವೀಕೃತವಾದ ಹಾಗೂ ಆಧಾರ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿರುವ 2,99,293 ಪಡಿತರ ಚೀಟಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ 17.78 ಕೋಟಿ ರೂ.ಗಳ ಹಣ ವರ್ಗಾವಣೆ ಮಾಡಲಾಗಿದೆ ಎಂದರು.
ಪ್ರತಿ ಮನೆಯೊಡತಿಗೆ ತಿಂಗಳಿಗೆ 2 ಸಾವಿರ ರೂ.ಗಳನ್ನು ನೀಡುವ ಗೃಹಲಕ್ಷ್ಮೀ ಯೋಜನೆಯಡಿ 4,34,852 ಗುರಿ ಪೈಕಿ ಶೇ.81.77 ರಷ್ಟು ಪ್ರಗತಿ ಸಾಧಿಸಲಾಗಿದೆ. ಪದವಿಧರ ಮತ್ತು ಡಿಪ್ಲೋಮಾ ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಎರಡು ವರ್ಷಗಳ ಕಾಲ ನಿರುದ್ಯೋಗ ಭತ್ಯೆಯನ್ನು ನೀಡುವ ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ 396 ಪದವಿಧರರು, 178 ಡಿಪ್ಲೋಮಾದಾರರು ಸೇರಿ ಒಟ್ಟು 574 ಯುವಕರು ಹೆಸರು ನೋಂದಾಯಿಸಿದ್ದಾರೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನ ಮಟ್ಟಿ ಎಪ್.ಆರ್.ಎಲ್ 519.60 ಮೀಟರದಿಂದ 524.256 ಮೀಟರವರೆಗೆ 188 ಗ್ರಾಮಗಳಲ್ಲಿನ ಮುಳುಗಡೆಯಾಗಲಿರುವ ಅಂದಾಜು 75563 ಎಕರ ಕ್ಷೇತ್ರವನ್ನು ಭೂಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಇಲ್ಲಿಯವರೆಗೆ 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ 27242 ಎಕರ ಭೂಸ್ವಾಧೀನ ಪಡಿಸಿಕೊಂಡು, ಪ್ರಗತಿ ಸಾಧಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಈಗಾಗಲೇ ಜಿಲ್ಲೆಯ 1,163 ರೈತರು ಮೊಬೈಲ್ ಆ್ಯಪ್ ಮುಖಾಂತರ ಬೆಳೆ ದತ್ತಾಂಶಗಳನ್ನು ದಾಖಲಿಸಿರುತ್ತಾರೆ. ಜಲಜೀವನ್ ಮಿಷನ್ ಯೋಜನೆಯಡಿ ಜುಲೈ ಅಂತ್ಯದವರೆಗೆ 1,79,716 ಮನೆಗಳಿಗೆ ಶುದ್ದ ಕುಡಿಯುವ ನೀರನ್ನು ನಲ್ಲಿಗಳ ಮೂಲಕ ಸಂಪರ್ಕ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ ಅಮರೇಶ ಪಮ್ಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.