ಗಾಂಜಾ ವಶ, ಆರು ಜನರ ಬಂಧನ

09DND5
Published on

ದಾಂಡೇಲಿ: ನಗರ ಹಾಗೂ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಜನರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ನಗರದ ಬರ್ಚಿ ರಸ್ತೆಯ ಕೆ.ಇ.ಬಿ. ಕಚೇರಿ ಎದುರು ಆಟೋದಲ್ಲಿ ಮಾರಾಟಕ್ಕೆ ಒಯ್ಯುತ್ತಿದ್ದ 267 ಗ್ರಾಂ ಗಾಂಜಾವನ್ನು ಮತ್ತು ಈ ಕೃತ್ಯಕ್ಕೆ ಬಳಸಲಾದ ಆಟೋ ಹಾಗೂ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಂವಠಾಣದ ವಿನೋದ ನಾಮದೇವ ಕುಂಬಾರ (23), ಶಾನೂ ರಫೀಕಸಾಬ್ ಕೊಪ್ಪದ ಎಂಬುವರನ್ನು ಬಂಧಿಸಲಾಗಿದೆ. ಇವರಿಗೆ ಗಾಂಜಾ ಮಾರಾಟ ಮಾಡಿದ ಆರೋಪಿ ನಗರದ ನರೇಗಲ್ ಪೆಟ್ರೋಲ್ ಬಂಕ್ ಹತ್ತಿರದ ನಿವಾಸಿ ಅಲ್ಲಾಭಕ್ಷ ಅಕ್ಬರ್ ಮುಲ್ಲಾ ಪರಾರಿಯಾಗಿದ್ದು, ಈತನ ಶೋಧ ಕಾರ್ಯ ಮುಂದುವರೆದಿದೆ.

ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್​ಐ ಹನುಮಂಂತ ಬಿರಾದಾರ ಖಚಿತ ಮಾಹಿತಿ ಮೇರೆಗೆ ಡಿವೈಎಸ್​ಪಿ ಶಿವಾನಂದ ಚಲುವಾದಿ, ಸಿಪಿಐ ಪ್ರಭು ಗಂಗನಹಳ್ಳಿ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ತಹಸೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ಡಾ. ಸೈಯದ್ ಜಾಹೇದಲಿ, ಸಿಪಿಐ ಪ್ರಭು ಗಂಗನಹಳ್ಳಿ, ಪಿಎಸ್​ಐ ಹನುಮಂತ ಬಿರಾದಾರ ಇತರ ಸಿಬ್ಬಂದಿ ಇದ್ದರು.

576 ಗ್ರಾಂ ಗಾಂಜಾ ವಶ
ಪಿಡಬ್ಲುಡಿ ಪ್ರವಾಸಿ ಮಂದಿರದ ಹತ್ತಿರ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ವೇಳೆ ನಗರದ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಮಾರುತಿನಗರದ ನಾಸೀರ ಮಹಮ್ಮದ ಅಲಿ ಖಾನ (22), ಸ್ಯಾಮಿವೆಲ್ ಜೀವಯ್ಯ ಈಲ್ಲೂರಿ (31), ಗಾಂಧಿನಗರ ಪಠಾಣ ಗಲ್ಲಿಯ ಗಣೇಶ ಆನಂದ ಕಾಂಬಳೆ (23), ಮಾರುತಿ ನಗರದ ರಹವಾಸಿ ಅಶೋಕ ದೇಮಣ್ಣ ಗೂರೊವ (22) ಬಂಧಿತರು. ಆರೋಪಿಗಳ ಬಳಿಯಿದ್ದ 576 ಗ್ರಾಂ (30 ಸಾವಿರ ರೂ. ಮೌಲ್ಯದ) ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net