ಹನೂರು: ತಾಲೂಕಿನ ಪುದು ರಾಮಾಪುರ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಸೋಮವಾರ ರಾಮಾಪುರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ನಾಗಣ್ಣನಗರದ ನಿವಾಸಿ ಹಾಲಿ ಚಂಗದಾರಹಳ್ಳಿಯಲ್ಲಿ ವಾಸವಿರುವ ಬಾಲು (65) ಬಂಧಿತ. ಈತ ಪುದು ರಾಮಾಪುರ ಗ್ರಾಮದ ಹೊರವಲಯದ ದೊಡ್ಡಗುಂಡು ಬಯಲಿನಲ್ಲಿ ಜಮೀನನ್ನು ಹೊಂದಿದ್ದು ಮರ ಗಿಡಗಳ ಪೊದೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ಸಬ್ ಇನ್‌ಸ್ಪೆಕ್ಟರ್ ಈಶ್ವರ್ ಅವರು ಡಿವೈಎಸ್ಪಿ ಧರ್ಮೇಂದ್ರ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ಜಮೀನಿನ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಗಾಂಜಾ ಬೆಳೆದಿರುವುದು ದೃಢಪಟ್ಟಿದೆ. ಬಳಿಕ ಒಟ್ಟು 6.43 ಕೆಜಿ ತೂಕವುಳ್ಳ 17 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.