

ಬೇಲೂರು: ಶ್ರೀ ಚನ್ನಕೇಶವ ದೇಗುಲ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದ್ದು ಇತಂಹ ಸ್ಥಳದಲ್ಲಿ ವಾಸಿಸುತ್ತಿರುವವರೇ ಧನ್ಯರು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ದೇಗುಲದ ಆಡಳಿತಾಧಿಕಾರಿ ಕೆ.ಟಿ.ಶಾಂತಲಾ ಹೇಳಿದರು.
ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಚನ್ನಕೇಶವ ದೇಗುಲದ ಆವರಣ ಶುಕ್ರವಾರ ರಾತ್ರಿ ಜಯ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ 14ನೇ ವರ್ಷದ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಚನ್ನಕೇಶವಸ್ವಾಮಿ ದೇಗುಲವನ್ನು ನೋಡಿ ಶಿಲ್ಪಕಲೆಗೆ ಮಾತ್ರ ಪ್ರಸಿದ್ಧಿ ಪಡೆದಿದೆ ಎಂದುಕೊಂಡಿದ್ದೆ. ಆದರೆ, ರಥೋತ್ಸವ, ಜಾತ್ರಾ ಮಹೋತ್ಸವಗಳಲ್ಲಿ ನಡೆಯುತ್ತಿರುವ ಪೂಜಾ ವಿಧಿ ವಿಧಾನಗಳನ್ನು ನೋಡಿದಾಗ ಭಕ್ತಿಯ ಪರಾಕಾಷ್ಠೆಗೆ ಸಿಲುಕಿದೆ. ವಿಶೇಷವೆಂದರೆ ಈ ದೇಗುಲದ ಆಡಳಿತಾಧಿಕಾರಿಯಾಗಿ ಜಾತ್ರಾ ಮಹೋತ್ಸವ ನಡೆಸಲು ಅವಕಾಶ ಸಿಕ್ಕಿದು ನನ್ನ ಪುಣ್ಯ ಎಂದರು.
ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಜಯ ಕರ್ನಾಟಕ ಸಂಘಟನೆ ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರದಲ್ಲಿ ಸಾಕಷ್ಟು ಹೋರಾಟ ನಡೆಸುತ್ತಿದೆ. ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮದ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನು ನಿರ್ಮಿಸಿದ್ದಾರೆ. ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪುರಸಭೆ ಸದಸ್ಯೆ ಹಾಗೂ ರೈತ ಮಹಿಳೆ ರತ್ನಾ ಸತ್ಯನಾರಾಯಣ್, ಜಯ ಕರ್ನಾಟಕ ಸಂಘಟನೆ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ವಿ.ಮಂಜುನಾಥ್, ಪೌರಕಾರ್ಮಿಕ ವಿಶ್ವನಾಥ್, ಚನ್ನಕೇಶವ ದೇಗುಲದ ಅಡ್ಡೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು, ತಹಸೀಲ್ದಾರ್ ಎಂ.ಮಮತಾ, ಜಿಪಂ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಶ್ರೀವಿದ್ಯಾ ವಿಕಾಸ್ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಂ.ರಮೇಶ್, ತಾಲೂಕು ಮೀನುಗಾರರ ಸಹಕಾರ ಮಂಡಳಿ ಅಧ್ಯಕ್ಷ ತೌಫಿಕ್, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರವಿ, ಕರವೇ ಅಧ್ಯಕ್ಷ ಚಂದ್ರಶೇಖರ್, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಆರ್.ಸೋಮೇಶ್, ತಾಲೂಕು ಘಟಕದ ಗೌರವಾಧ್ಯಕ್ಷ ಅರುಣ್ ಕುಮಾರ್, ಕಾರ್ಯಾಧ್ಯಕ್ಷ ಲಕ್ಷ್ಮಣ್, ಉಪಾಧ್ಯಕ್ಷ ಅಕ್ಕಿರಾಜು, ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ಇತರರಿದ್ದರು.