ಗಬ್ಬೆದ್ದಿರುವ ಅಮಲಝರಿ ಮುಕ್ತಿಧಾಮ !

bkt-27-12
ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಮಲಝರಿ ಗ್ರಾಮದಲ್ಲಿ ಇರುವ ಸಾರ್ವಜನಿಕ ಸ್ಮಶಾನದಲ್ಲಿ ತ್ಯಾಜ್ಯ ತುಂಬಿಕೊಂಡು ಗಬ್ಬೆದ್ದು ಹೋಗಿರುವುದು ಹಾಗೂ ಅಧೋಗತಿಯಲ್ಲಿ ಇರುವ ಸ್ಮಶಾನ ಮಾರ್ಗ.
Published on

ಬಾಗಲಕೋಟೆ: ಈ ಊರಲ್ಲಿ ಸ್ಮಶಾನ ಜಾಗೆ ಇದೆ. ಆದರೆ, ಅಲ್ಲಿ ಹೋಗುವ ಪರಿಸ್ಥಿತಿ ಮಾತ್ರ ಇಲ್ಲ. ಊರಿನ ಕೊಳಚೆ ಸ್ಮಶಾನ ತುಂಬಿಕೊಂಡಿದೆ. ಮಳೆ ಬಂದೂ ಮುಕ್ತಿಮಂದಿರ ಕೆರೆಯಂತಾಗಿದ್ದು, ಗ್ರಾಮದಲ್ಲಿ ಯಾರಾದರೂ ಪ್ರಾಣ ಬಿಟ್ಟರೆ ತಮ್ಮ ಜಮೀನುಗಳಲ್ಲಿ ಮರ‍್ನಾಲ್ಕು ಕಿ.ಮೀ. ದೂರ ಹೋಗಿ ಅಂತ್ಯಸಂಸ್ಕಾರ ಮಾಡುವ ಪರಿಸ್ಥಿತಿ ಎದುರಾಗಿದೆ.

ಹೌದು, ಇದು ರಾಜ್ಯದಲ್ಲಿ ಮಾದರಿ ಗ್ರಾಮ ಪಂಚಾಯಿತಿ ಎನ್ನುವ ಹೆಗ್ಗಳಿಕೆ ಹೊಂದಿರುವ ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಅಮಲಝರಿ ಗ್ರಾಮದ ಸ್ಮಶಾನದ ದುಸ್ಥಿತಿ. ಬೀಳಗಿ ಶಾಸಕ ಜೆ.ಟಿ.ಪಾಟೀಲ ಅವರು ತಮರು ಪಂಚಾಯಿತಿ ಯಡಹಳ್ಳಿ ವ್ಯಾಪ್ತಿಗೆ ಬರುತ್ತದೆ ಎನ್ನುವುದು ಗಮನಾರ್ಹ.

ಕಳೆದ ಕೆಲವು ದಿನಗಳಿಂದ ಈ ಸ್ಮಶಾನಕ್ಕೆ ಹೋಗಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮುಳ್ಳು ಕಂಟಿಗಳು ತುಂಬಿವೆ. ತ್ಯಾಜ್ಯ ಆವರಿಸಿದೆ. ಜೊತೆಗೆ ಮಳೆ ನೀರು ತುಂಬಿಕೊಂಡು ಗಬ್ಬೆದ್ದು ಹೋಗಿದೆ. ಆದರೂ ಈ ಬಗ್ಗೆ ಪಂಚಾಯಿತಿ ಅಽಕಾರಿಗಳು, ಆಡಳಿತ ಮಾತ್ರ ಅತ್ತ ತಿರುಗಿಯೂ ನೋಡಿಲ್ಲ. ಪಂಚಾಯಿತಿ ಕೇಂದ್ರ ಸ್ಥಾನದ ಅಭಿವೃದ್ಧಿಗೆ ಮಾತ್ರ ಅವರೆಲ್ಲ ಗಮನ ಕೊಡುತ್ತಿದ್ದಾರೆ ವಿನಃ ತಮ್ಮ ವ್ಯಾಪ್ತಿಗೆ ಬರುವ ಊರಿನ ಪರಿಸ್ಥಿತಿ ಏನಾಗಿದೆ ಎಂದು ಕಣ್ಣಾಯಿಸಲು ಅವರು ಮುಂದಾಗಲ್ಲ ಎಂದು ಗ್ರಾಮದ ರಾಜ್ಯ ರೈತ ಸಂಘದ ಮುಖಂಡ ಸಿದ್ದಪ್ಪ ಬಳಗಾನೂರ ಆರೋಪಿಸುತ್ತಾರೆ.

ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧ ಮಾಡಿ ಅದರ ಕೀರ್ತಿ ಪಡೆಯುವ ಉದ್ಧೇಶದಿಂದ ನಾಮಪತ್ರ ಸಲ್ಲಿಸಿದ್ದವರನ್ನು ಹಿಂದೆ ಸರಿಸಿ, ಯಡಹಳ್ಳಿಯ ಪ್ರಮುಖರು ತಾವು ಹೆಸರು ಪಡೆದುಕೊಂಡರು. ಆದರೆ, ನಮ್ಮ ಅಮಲಝರಿ ಗ್ರಾಮಕ್ಕೆ ಮಾತ್ರ ಅನ್ಯಾಯ ಮಾಡಿದರು. ಯಡಹಳ್ಳಿ ಪಂಚಾಯಿತಿಯಿಂದ ಅಮಲಝರಿ ಗ್ರಾಮವನ್ನು ಪ್ರತ್ಯೇಕಗೊಳಿಸಿ ಎಂದರೂ ಸರ್ಕಾರ ಅದಕ್ಕೂ ಕಿವಿಗೊಡುತ್ತಿಲ್ಲ. ಕೊನೆಗೆ ಸ್ಮಶಾನ ಸಮಸ್ಯೆಗಾದರೂ ಬಗೆಹರಿಸಿ ಎಂದರೂ ಜಿಲ್ಲಾಡಳಿತ ಇತ್ತ ಗಮನ ಹರಿಸುತ್ತಿಲ್ಲ. ಇದರಿಂದ ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಅವರ ಅಂತ್ಯಸಂಸ್ಕಾರದ್ದು ದೊಡ್ಡ ಸಮಸ್ಯೆ ಆಗಿದೆ. ಜಮೀನು ಇದ್ದರೂ ದೂರವಾದರೂ ಹೋಗಿ ಅಂತ್ಯಸಂಸ್ಕಾರ ಮಾಡುತ್ತಾರೆ. ಜಮೀನು ಇಲ್ಲದವರ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಎರಡ್ಮೂರು ದಿನಗಳಲ್ಲಿ ಅಮಲಝರಿ ಗ್ರಾಮದ ಸ್ಮಶಾನ ಸ್ವಚ್ಛಗೊಳಿಸಿ, ಇಲ್ಲಿ ತ್ಯಾಜ್ಯ ಬರದಂತೆ ಕ್ರಮ ಜರುಗಿಸಬೇಕು. ನೀರು ನಿಲ್ಲದಂತೆ ಜಾಗವನ್ನು ಎತ್ತರಿಸಬೇಕು. ಇಲ್ಲವಾದರೆ ಜಿಲ್ಲಾಡಳಿತದ ವಿರುದ್ಧ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಬೀಳಗಿ ತಾಲೂಕು ಆಡಳಿತ ಕೇಂದ್ರದ ಎದುರು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ರೈತ ಮುಖಂಡ ಸಿದ್ದಪ್ಪ ಬಗಳಾನೂರ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net