ಗಾಂಧೀಜಿ ತತ್ವಾದರ್ಶ ಮಾರ್ಗದರ್ಶನವಾಗಲಿ

2-pnp 1
Published on

ಪಾಂಡವಪುರ: ದೇಶದ ಸ್ವಾತಂತ್ರೃಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾತ್ಮ ಗಾಂಧಿ ಅವರ ತತ್ವಾದರ್ಶ ನಮಗೆ ಮಾರ್ಗದರ್ಶನವಾಗಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.


ಪಟ್ಟಣದ ಆಡಳಿತ ಸೌಧದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಗಾಂಧೀಜಿ ಅವರ 155ನೇ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.


ಸರಳ ಜೀವಿಯಾಗಿದ್ದ ಗಾಂಧಿ ಅವರು ಅಹಿಂಸಾ ತತ್ವದ ಮೂಲಕ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದರು. ನಾವು ಗಾಂಧಿ ಅವರ ಸರಳತೆ ಮತ್ತು ಅಹಿಂಸಾ ವಾದವನ್ನು ಪಾಲಿಸಬೇಕು. ಕೇವಲ ಜಯಂತಿ ದಿನದಂದು ಮಹಾತ್ಮರನ್ನು ನೆನಪಿಸಿಕೊಳ್ಳಬಾರದು, ಪ್ರತಿ ದಿನವೂ ಅವರು ನಡೆದು ಬಂದ ಹಾದಿಯನ್ನು ಸ್ಮರಿಸುವ ಕೆಲಸ ಮಾಡಬೇಕು. ಗಾಂಧಿ ಅವರ ಹೋರಾಟದ ಮಹತ್ವ ಕೇವಲ ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವವೇ ಸ್ಮರಿಸುತ್ತಿದೆ ಎಂದರು.


ಪಂಚಾಯತ್‌ರಾಜ್ ವ್ಯವಸ್ಥೆ ಜಾರಿಗೆ ಬರಲು ಗಾಂಧಿ ಅವರ ಕೊಡುಗೆ ದೊಡ್ಡದಾಗಿದೆ. ಇಡೀ ವಿಶ್ವವೇ ಅವರ ಆಚಾರ, ವಿಚಾರಗಳನ್ನು ಅಳವಡಿಸಿಕೊಂಡಿದೆ. ನಾವು ನಮ್ಮ ಮಕ್ಕಳನ್ನು ಟಿವಿ, ಮೊಬೈಲ್‌ಗಳಿಂದ ದೂರವಿಟ್ಟು ಮಹನೀಯರ ಆದರ್ಶಗಳನ್ನು ತಿಳಿಸುವ ಮೂಲಕ ದೇಶಪ್ರೇಮಿಯನ್ನಾಗಿಸುವ ಕೆಲಸ ಮಾಡಬೇಕು ಎಂದರು.


ತಹಸೀಲ್ದಾರ್ ಎಸ್.ಸಂತೋಷ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಲ್ಲಿ ಗಾಂಧೀಜಿ ಅಗ್ರ ಗಣ್ಯರು, ವಿಶ್ವ ಮಾನವ ವ್ಯಕ್ತಿತ್ವವುಳ್ಳವರು. ಕ್ವಿಟ್ ಇಂಡಿಯಾ ಚಳವಳಿ, ಉಪ್ಪಿ ಸತ್ಯಾಗ್ರಹ, ಅಸಹಕಾರ ಚಳವಳಿ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಇತ್ಯಾದಿ ಹೋರಾಟಗಳ ಮೂಲಕ ದೇಶಕ್ಕೆ ಸ್ವಾತಂತ್ರೃ ತಂದು ಕೊಟ್ಟರು ಎಂದರು.


ಉಪ ವಿಭಾಗೀಯ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ, ಸಬ್ ಇನ್ಸ್‌ಪೆಕ್ಟರ್ ಆರ್.ಬಿ.ಉಮೇಶ್, ರೇಷ್ಮೇ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಕಾಂಗ್ರೆಸ್ ಮುಖಂಡ ಸಿ.ಆರ್.ರಮೇಶ್, ಕೆ.ಬಿ.ರಾಮು, ದಸಂಸ ಮುಖಂಡ ಡಿ.ಕೆ.ಅಂಕಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net